ಮೂಡುಬಿದಿರೆ : ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸೇರಿದಂತೆ ವಿವಿಧ ಅವ್ಯವಸ್ಥೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳ ಸಚಿವಾಲಯವು, ವಾಸ್ತವಾಂಶಗಳನ್ನು ಪರಿಶೀಲಿಸಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಮೂಡುಬಿದಿರೆ ಪುರಸಭೆಗೆ ಸೂಚಿಸಿದೆ.
ಈ ಸಂಬಂಧ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ವೈಷ್ಣವಿ ಅವರು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಂಡು ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಮೂಡುಬಿದಿರೆ ಪುರಸಭೆಯು ಅಕ್ಟೋಬರ್ 22ರಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗೆ ಪತ್ರ ಬರೆದು, ಈವರೆಗೆ ಕೈಗೊಂಡಿರುವ ಕ್ರಮಗಳ ವಿವರಗಳನ್ನು ಸಲ್ಲಿಸಿದೆ.
ಆಗಸ್ಟ್ 27ರಂದು ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಪಟ್ಟಣದ ಸಂಚಾರ ಮತ್ತು ಪಾರ್ಕಿಂಗ್ ಸಮಸ್ಯೆಗಳ ಕುರಿತು ಚರ್ಚಿಸಲಾಗಿತ್ತು. ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು, ಪುರಸಭೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಬಳಿಕ ಸೆಪ್ಟೆಂಬರ್ 1ರಂದು ಪೊಲೀಸ್ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಸಂಚಾರ ವ್ಯವಸ್ಥೆ ಮತ್ತು ಪಾರ್ಕಿಂಗ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚೆ ನಡೆಸಲಾಗಿತ್ತು.
ಪುರಸಭೆ ವ್ಯಾಪ್ತಿಯ 10 ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಅಗತ್ಯವಿರುವ ಕಡೆ ಸಂಚಾರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪುರಸಭೆ ತಿಳಿಸಿದೆ.
ಸೆಪ್ಟೆಂಬರ್ 2ರಿಂದ ಬಸ್ ನಿಲ್ದಾಣದಲ್ಲಿ ಬಸ್ಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಬಸ್ ನಿಲುಗಡೆ ವ್ಯವಸ್ಥೆಯನ್ನು ಸುಧಾರಿಸಲಾಗಿದೆ. ಬಸ್ಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಅಗತ್ಯ ಕ್ರಮಗಳನ್ನು ವಹಿಸಲಾಗಿದೆ. ಅಲ್ಲದೆ, ಬಸ್ ನಿಲ್ದಾಣದ ಒಳಭಾಗದಲ್ಲಿ ಇಂಟರ್ಲಾಕ್ ಅಳವಡಿಸುವ ಕಾಮಗಾರಿಯನ್ನೂ ಕೈಗೊಳ್ಳಲಾಗಿದೆ ಎಂದು ಪುರಸಭೆ ತನ್ನ ಪತ್ರದಲ್ಲಿ ವಿವರಿಸಿದೆ.
ಮುಖ್ಯಮಂತ್ರಿಗಳ ಸಚಿವಾಲಯದ ಸೂಚನೆಯ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಪಾರ್ಕಿಂಗ್ ಹಾಗೂ ಸಂಚಾರ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆಯೇ ಎಂಬುದನ್ನು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.

