ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ವಿವೇಕ ವಿಜಯ – ವಿಶೇಷ ಉಪನ್ಯಾಸಗಳು

0
13

ಭಾರತವು ಪಾಶ್ಚಾತ್ಯರ ಆಳ್ವಿಕೆಯಲ್ಲಿದ್ದ ಕಾಲಘಟ್ಟದಲ್ಲಿ ಅಮೇರಿಕಾದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆಯನ್ನು ವಿಶ್ವಕ್ಕೆ ಸಾರಿದವರು ರಾಷ್ಟ್ರಭಕ್ತ ಸಂತ ಸ್ವಾಮಿ ವಿವೇಕಾನಂದರು. 1893 ನೇ ಇಸವಿಯ ಸೆಪ್ಟೆಂಬರ್ 11 ರಂದು ಸ್ವಾಮಿ ವಿವೇಕಾನಂದರು ಮಾಡಿದ ಐತಿಹಾಸಿಕ ಭಾಷಣದ 133ನೇ ವರ್ಷಾಚರಣೆಯ ಸುಸಂದರ್ಭದಲ್ಲಿ ಪುತ್ತೂರಿನ ವಿವೇಕಾನಂದ ಪದವಿಪೂರ್ವ ವಿದ್ಯಾಲಯವು “ವಿವೇಕ ವಿಜಯ” ಎಂಬ ಶೀರ್ಷಿಕೆಯೊಂದಿಗೆ ವಿಶೇಷ ಉಪನ್ಯಾಸಗಳನ್ನು ಮೂರು ಅವಧಿಗಳಲ್ಲಿ ದಿನಾಂಕ 11 ಸೆಪ್ಟೆಂಬರ್ 2026 ಶುಕ್ರವಾರದಂದು ಪುತ್ತೂರಿನ ನೆಹರು ನಗರದಲ್ಲಿರುವ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆವರಣದ ವೈದೇಹಿ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.

ಉದ್ಘಾಟನೆ ಹಾಗೂ ಮೊದಲ ಅವಧಿ: ಬೆಳಗ್ಗೆ 9.15 ಕ್ಕೆ ಸರಿಯಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ವಿವೇಕ ವಿಜಯ ವಿಶೇಷ ಉಪನ್ಯಾಸಗಳ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ವಿಜಯನಾರಾಯಣ ಕೆ. ಎಂ. ಅವರು ನೆರವೇರಿಸಲಿದ್ದಾರೆ. ಉದ್ಘಾಟನೆಯ ನಂತರ ನಡೆಯುವ ಮೊದಲ ಅವಧಿಯಲ್ಲಿ ಚಿಂತಕರು ಹಾಗೂ ಖ್ಯಾತ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆಯವರು ವಿದ್ಯಾರ್ಥಿಗಳನ್ನುದ್ದೇಶಿಸಿ “ಭಾರತೀಯತೆ ಮತ್ತು ಯುವ ಜನತೆ” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಪುತ್ತೂರಿನ ಎಸ್. ಆರ್. ಕೆ. ಲ್ಯಾಡರ್ಸ್ ಮಾಲಕರಾದ ಕೇಶವ ಅಮೈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ. ಅವರು ಉಪಸ್ಥಿತರಿರಲಿದ್ದಾರೆ. ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಭಾಗವಹಿಸಲಿದ್ದಾರೆ.

ಎರಡನೇ ಅವಧಿ: ಎರಡನೇ ಅವಧಿಯು ಬೆಳಗ್ಗೆ 11.45 ಕ್ಕೆ ಸರಿಯಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ನಡೆಯಲಿದ್ದು ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಶಿಕ್ಷಕರಿಗೆ ಹಾಗೂ ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳಿಗೆ “ವರ್ತಮಾನ ಶಿಕ್ಷಣ ಮತ್ತು ಭವಿಷ್ಯ ಭಾರತ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾಗತರಾಗಿ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಗಂಗಾಧರ ರೈ ಪೆರ್ನೆ ಭಾಗವಹಿಸಲಿದ್ದಾರೆ. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯನಿರ್ದೇಶಕರಾದ ವತ್ಸಲಾ ರಾಜ್ಞಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಮೂರನೇ ಅವಧಿ : ಮೂರನೇ ಅವಧಿಯಲ್ಲಿ “ಯುವಜನತೆ ಮತ್ತು ವೈಚಾರಿಕ ಸವಾಲುಗಳು” ಎಂಬವಿಷಯದ ಕುರಿತು ಆಸಕ್ತರಿಗಾಗಿ ವಿಶೇಷ ಅವಧಿಹಾಗೂಸಂವಾದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಸಂಜೆ 4.30 ಗಂಟೆಗೆ ಸರಿಯಾಗಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಶ್ರೀಚಕ್ರವರ್ತಿ ಸೂಲಿಬೆಲೆಯವರು ವಿಷಯ ಮಂಡನೆ ನಡೆಸಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಪುತ್ತೂರಿನ ಲಾಜಿಕ್ ಹೈವ್ ನ ಸ್ಥಾಪಕರು ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾದ ಪ್ರತೀಕ್ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 81050 72386, 89719 24424 ಸಂಪರ್ಕ ಸಂಖ್ಯೆಗಳನ್ನು ಸಂಪರ್ಕಿಸಬಹುದು.