ಹೊಸಬೆಟ್ಟುವಿನಲ್ಲಿ ಸೆ.14ರಂದು 14ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0
12

ಕುಳಾಯಿ : ಶ್ರೀ ಪುತ್ತಿಗೆ ಮಠ ಶಾಖೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಕುಳಾಯಿ-ಹೊಸಬೆಟ್ಟು ಹಾಗೂ ಶ್ರೀ ರಾಘವೇಂದ್ರ ಸ್ವಾಮಿ ಮಠ, ಹೊಸಬೆಟ್ಟು ಇದರ ಆಶ್ರಯದಲ್ಲಿ 14ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.14ರಂದು ಹೊಸಬೆಟ್ಟು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತನು-ಮನ-ಧನಗಳಿಂದ ಸಹಕರಿಸಿ ಶ್ರೀ ವಿನಾಯಕನ ಕೃಪೆಗೆ ಪಾತ್ರರಾಗುವಂತೆ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮನವಿ ಮಾಡಿದ್ದಾರೆ.

ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು

ಸೆ.14ರಂದು ಬೆಳಗ್ಗೆ 6.30ಕ್ಕೆ ಶ್ರೀ ಮಹಾಗಣಪತಿಯ ವಿಗ್ರಹ ಪ್ರತಿಷ್ಠೆ ಹಾಗೂ ಪೂಜೆ ನಡೆಯಲಿದೆ. ಬೆಳಗ್ಗೆ 9ಕ್ಕೆ ಗಣಹೋಮ ನೆರವೇರಲಿದೆ. ಇದೇ ಸಮಯದಲ್ಲಿ ಬೆಳಗ್ಗೆ 9ರಿಂದ 10ರವರೆಗೆ ಶ್ರೀ ಹಯವದನ ಸಂಗೀತ ಕಲಾಕೇಂದ್ರ, ಹೊಸಬೆಟ್ಟು ವತಿಯಿಂದ ವಿದುಷಿ ಡಾ. ಶ್ರೀಲತಾ ರಾಮದಾಸ್ ಅವರ ವಿದ್ಯಾರ್ಥಿಗಳಿಂದ ‘ಭಕ್ತಿ-ಗಾನ-ಅರ್ಚನೆ’ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 10ರಿಂದ 11ರವರೆಗೆ ಶ್ರೀ ರಾಘವೇಂದ್ರ ಭಜನಾ ಮಂಡಳಿ, ಹೊಸಬೆಟ್ಟು ವತಿಯಿಂದ ಭಜನಾ ಕಾರ್ಯಕ್ರಮ ಹಾಗೂ 11ರಿಂದ ಮಧ್ಯಾಹ್ನ 12.30ರವರೆಗೆ ವಿದುಷಿ ಭಾರತಿ ಸುರೇಶ್ ಅವರ ಶಿಷ್ಯವೃಂದದಿಂದ ‘ನೃತ್ಯಾರಾಧನೆ’ ನಡೆಯಲಿದೆ.

ಮಧ್ಯಾಹ್ನ 12.30ಕ್ಕೆ ಮಧ್ಯಾಹ್ನದ ಪೂಜೆ ನಡೆಯಲಿದ್ದು, ಮಧ್ಯಾಹ್ನ 2ರಿಂದ 3.30ರವರೆಗೆ ರಾಗ ತರಂಗಿಣಿ ವತಿಯಿಂದ ‘ಚೌತಿ ಬೆಳಗು’ ಭಕ್ತಿಗೀತೆ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 3.30ರಿಂದ ಸಂಜೆ 5ರವರೆಗೆ ಬಾಲವಿಕಾಸ ಭಜನಾ ಮಂಡಳಿ, ಹೊಸಬೆಟ್ಟು ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಕ್ಕೆ ಮಹಾಪೂಜೆ ನೆರವೇರಲಿದೆ.

ರಾತ್ರಿ 10ಕ್ಕೆ ಅರಬ್ಬೀ ಸಮುದ್ರದ ಕಿನಾರೆಯಲ್ಲಿ ಶ್ರೀ ಮಹಾಗಣಪತಿ ವಿಗ್ರಹ ವಿಸರ್ಜನೆ ನಡೆಯಲಿದೆ.

ವೃಂದಾವನ ನಗರದಿಂದ ಶೋಭಾಯಾತ್ರೆ

ಶ್ರೀ ಮಹಾಗಣಪತಿ ವಿಗ್ರಹದ ಶೋಭಾಯಾತ್ರೆಯು ವೃಂದಾವನ ನಗರದಿಂದ ಆರಂಭವಾಗಿ ಮಾರುತಿ ನಗರದ ಮೂಲಕ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸೇರಲಿದೆ. ಬಳಿಕ ಹೊನ್ನಕಟ್ಟೆ-ಕುಳಾಯಿ ವೃತ್ತದಲ್ಲಿ ತಿರುಗಿ ಹೊಸಬೆಟ್ಟು ಪಶ್ಚಿಮ ಮಾರ್ಗವಾಗಿ ಮುಂದುವರಿಯಲಿದೆ.

ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಭಕ್ತರು ತಮ್ಮ ಮನೆ ಹಾಗೂ ಅಂಗಡಿ ಮುಂಭಾಗದಲ್ಲಿ ಅಲಂಕಾರ ಮಾಡಿ, ಹಣ್ಣುಕಾಯಿ ಹಾಗೂ ಆರತಿ ಸೇವೆ ಸಲ್ಲಿಸಬಹುದಾಗಿದೆ ಎಂದು ಸಮಿತಿ ತಿಳಿಸಿದೆ. ಸಾರ್ವಜನಿಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶೋತ್ಸವವನ್ನು ಯಶಸ್ವಿಗೊಳಿಸುವಂತೆ ಸಮಿತಿ ಮನವಿ ಮಾಡಿದೆ.