ಬೆದ್ರದ ಕೃಷ್ಣೋತ್ಸವದಲ್ಲಿ ಸಾಂಪ್ರದಾಯಿಕ ಮೊಸರು ಕುಡಿಕೆ ಆಡಿಸಿದ ಚಿತ್ರನಟ ಅರ್ಜುನ್ ದೇವ್

0
32

ಮೂಡುಬಿದಿರೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಜಾವನೇರ ಬೆದ್ರ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ‘ಬೆದ್ರದ ಕೃಷ್ಣೋತ್ಸವ 2026’ ಕಾರ್ಯಕ್ರಮದಲ್ಲಿ ತುಳು–ಕನ್ನಡ ಚಿತ್ರರಂಗದ ನಟ ಅರ್ಜುನ್ ದೇವ್ ಅವರು ಸಾಂಪ್ರದಾಯಿಕ ಮೊಸರು ಕುಡಿಕೆ ಆಡಿಸುವ ಮೂಲಕ ಸಂಭ್ರಮಿಸಿದರು.

110 ವರ್ಷಗಳ ಇತಿಹಾಸ ಹೊಂದಿರುವ ಈ ಸಾಂಪ್ರದಾಯಿಕ ಮೊಸರು ಕುಡಿಕೆ ಉತ್ಸವದಲ್ಲಿ ಯಕ್ಷಗಾನೀಯ ಶೈಲಿಯ ಸಂಭ್ರಮದೊಂದಿಗೆ ತೂಗು ಹಾಕಲಾಗಿದ್ದ ಮಡಿಕೆಗಳನ್ನು ಆಡಿಸಿದ ಅರ್ಜುನ್ ದೇವ್, ಜನತೆಯೊಂದಿಗೆ ಬೆರೆತು ಉತ್ಸವದ ಸಂಭ್ರಮವನ್ನು ಹಂಚಿಕೊಂಡರು.

ಬಳಿಕ ವೇದಿಕೆಯಲ್ಲಿ ಮಾತನಾಡಿದ ಅವರು, ಬೆದ್ರದ ಕೃಷ್ಣೋತ್ಸವದಂತಹ ಸಾಂಪ್ರದಾಯಿಕ ಆಚರಣೆಯಲ್ಲಿ ಭಾಗವಹಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಇಂತಹ ಉತ್ಸವಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಮ್ಮ ನೂತನ ತುಳು–ಕನ್ನಡ ಚಿತ್ರ ‘ಟಾಸ್’ ಚಿತ್ರವನ್ನು ತುಳುನಾಡಿನ ಜನತೆ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಜಾವನೇರ ಬೆದ್ರ ಫೌಂಡೇಶನ್‌ನ ಸಂಸ್ಥಾಪಕ ಅಮರ ಕೋಟೆ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷರು ಸುದರ್ಶನ್ ಎಂ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.