ಯಶವಂತಪುರ–ಮಂಗಳೂರು ವಂದೇ ಭಾರತ್‌ : ಸೆ.10 (ಇಂದು) ಮತ್ತೊಂದು ಪ್ರಾಯೋಗಿಕ ಸಂಚಾರ

0
36

ಸುಬ್ರಹ್ಮಣ್ಯ: ಯಶವಂತಪುರ–ಮಂಗಳೂರು ನಡುವೆ 16 ಕೋಚ್‌ಗಳ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮತ್ತೊಂದು ಹಂತದ ಪ್ರಾಯೋಗಿಕ ಸಂಚಾರ ಸೆಪ್ಟೆಂಬರ್‌ 10ರಂದು ನಡೆಯಲಿದೆ. ಈ ವೇಳೆ ಸುಬ್ರಹ್ಮಣ್ಯ ರೋಡ್‌ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ರೈಲಿನ ಸಂಚಾರ ಸಮಯ, ನಿಲುಗಡೆ ಹಾಗೂ ಕಾರ್ಯಾಚರಣಾ ಅಂಶಗಳನ್ನು ಪರಿಶೀಲಿಸಲಾಗುತ್ತದೆ.

ರೈಲ್ವೆ ಮಂಡಳಿಯ ಸೂಚನೆಯಂತೆ ದಕ್ಷಿಣ-ಪಶ್ಚಿಮ ರೈಲ್ವೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಖಾಲಿ ಬೋಗಿಗಳೊಂದಿಗೆ ಪ್ರಾಯೋಗಿಕ ಸಂಚಾರ ನಡೆಯಲಿದ್ದು, 16 ಕೋಚ್‌ಗಳ IC2015 ಸಂಖ್ಯೆಯ ರೈಲನ್ನು ಪರೀಕ್ಷೆಗೆ ಬಳಸಲಾಗುತ್ತಿದೆ.

ತಾತ್ಕಾಲಿಕ ವೇಳಾಪಟ್ಟಿಯಂತೆ ಬೆಳಗ್ಗೆ 6.50ಕ್ಕೆ ಯಶವಂತಪುರದಿಂದ ಹೊರಡುವ ರೈಲು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್‌ ಹಾಗೂ ಕಬಕ ಪುತ್ತೂರು ಮಾರ್ಗವಾಗಿ ಮಂಗಳೂರು ಜಂಕ್ಷನ್‌ ತಲುಪಲಿದೆ. ಬೆಳಗ್ಗೆ 9.33ಕ್ಕೆ ಹಾಸನ, 10.25ಕ್ಕೆ ಸಕಲೇಶಪುರ ಹಾಗೂ ಮಧ್ಯಾಹ್ನ 12.50ಕ್ಕೆ ಸುಬ್ರಹ್ಮಣ್ಯ ರೋಡ್‌ ತಲುಪಲಿದೆ. ಬಳಿಕ ಕಬಕ ಪುತ್ತೂರು ಮೂಲಕ ಮಧ್ಯಾಹ್ನ 2.40ಕ್ಕೆ ಮಂಗಳೂರು ಜಂಕ್ಷನ್‌ ತಲುಪುವ ನಿರೀಕ್ಷೆಯಿದೆ.

ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 3.10ಕ್ಕೆ ರೈಲು ಯಶವಂತಪುರದತ್ತ ವಾಪಸ್‌ ಪ್ರಯಾಣ ಆರಂಭಿಸಲಿದೆ. ಕಬಕ ಪುತ್ತೂರು, ಸಕಲೇಶಪುರ ಹಾಗೂ ಹಾಸನ ಮಾರ್ಗವಾಗಿ ರಾತ್ರಿ 10.30ರ ಸುಮಾರಿಗೆ ಯಶವಂತಪುರ ತಲುಪುವಂತೆ ತಾತ್ಕಾಲಿಕ ವೇಳಾಪಟ್ಟಿ ರೂಪಿಸಲಾಗಿದೆ.

ಸಕಲೇಶಪುರ–ಸುಬ್ರಹ್ಮಣ್ಯ ರೋಡ್‌ ನಡುವಿನ ಘಾಟ್‌ ಪ್ರದೇಶದಲ್ಲಿ ವಂದೇ ಭಾರತ್‌ ರೈಲಿನ ಸಂಚಾರದ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತದೆ. ರೈಲಿನ ವೇಗ, ಸುರಕ್ಷತೆ, ಕಾರ್ಯಾಚರಣಾ ಸಾಮರ್ಥ್ಯ ಹಾಗೂ ನಿಲುಗಡೆ ಸಮಯ ಸೇರಿದಂತೆ ವಿವಿಧ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ.

ಬೆಂಗಳೂರು ಮತ್ತು ಮೈಸೂರು ವಿಭಾಗಗಳ ರೈಲ್ವೆ ಅಧಿಕಾರಿಗಳು ಸೇರಿದಂತೆ ವೇಳಾಪಟ್ಟಿ ನಿಯಂತ್ರಕರು, ವಿದ್ಯುತ್‌, ಹಳಿ ಮತ್ತು ಎಂಜಿನಿಯರಿಂಗ್‌, ಯಾಂತ್ರಿಕ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಯೋಗಿಕ ಸಂಚಾರದಲ್ಲಿ ಭಾಗವಹಿಸಲಿದ್ದಾರೆ. ಸಂಚಾರ ಪೂರ್ಣಗೊಂಡ ಬಳಿಕ ಪರಿಶೀಲನೆಯ ವಿವರಗಳನ್ನು ಒಳಗೊಂಡ ವರದಿಯನ್ನು ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ.

ಈ ಪ್ರಾಯೋಗಿಕ ಸಂಚಾರದ ಬಳಿಕ ಬೆಂಗಳೂರು–ಮಂಗಳೂರು ವಂದೇ ಭಾರತ್‌ ರೈಲಿನ ಅಂತಿಮ ವೇಳಾಪಟ್ಟಿ, ನಿಲ್ದಾಣಗಳು ಹಾಗೂ ವಾಣಿಜ್ಯ ಸಂಚಾರ ಆರಂಭದ ಕುರಿತು ರೈಲ್ವೆ ಇಲಾಖೆ ಕೈಗೊಳ್ಳುವ ನಿರ್ಧಾರ ಮಹತ್ವ ಪಡೆದಿದೆ.