
ಕಾರ್ಕಳದ ಶ್ರೀಮದ್ ಭುವನೇಂದ್ರ ವಿದ್ಯಾ ಸಂಸ್ಥೆಯಲ್ಲಿ ಶ್ರಾವಣ ಬಹುಳ ದ್ವಾದಶಿಯಂದು ಸಂಸ್ಥೆಯ ಸಂಪ್ರದಾಯದಂತೆ ಸಂಸ್ಥಾಪಕರ ದಿನವನ್ನು ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಎ. ಯೋಗೀಶ್ ಹೆಗ್ಡೆಯವರು ವಹಿಸಿ ಮಾತನಾಡುತ್ತಾ ಶ್ರೀ ಶ್ರೀ ಶ್ರೀಮದ್ ಭುವನೇಂದ್ರ ಯತಿ ಶ್ರೇಷ್ಠರು ಕಾರ್ಕಳದ ಮಾರುತಿ ನಿಲಯದ ಕಾಮತ್ ಮನೆತನದ ಹಿರಿಯರಿಗೆ ಯೋಗ್ಯ ಶಿಕ್ಷಣದ ವಿದ್ಯಾಲಯವನ್ನು ನಿರ್ಮಾಣ ಮಾಡಿ ಎಂದು ನೀಡಿದ ಪ್ರಸಾದದ ಭಕ್ತಿಯ ಪ್ರಾರ್ಥನೆಯ ಸಂಕಲ್ಪ ರೂಪವೇ ಇಂದು ಶಿಕ್ಷಣ ನೀಡುತ್ತಿರುವ ಅಭಿಮಾನದ ಶ್ರೀಮದ್ ಭುವನೇಂದ್ರ ವಿದ್ಯಾ ಸಂಸ್ಥೆ ಎಂದು ಹೇಳಿದರು. ಯತಿ ಶ್ರೀವಾಣಿಯಂತೆ ಯೋಗ್ಯ ಶಿಕ್ಷಣ ನೀಡುವ ಸಂಸ್ಥೆ ನಿರ್ಮಿಸಿ ಉದಾರ ಧನ ದಾನ ಮಾಡಿದ ಪ್ರಾತಃಸ್ಮರಣೀಯ ಹಿರಿಯ ಚೇತನರನ್ನು ಸ್ಮರಿಸಿ ಅವರ ಆಶೀರ್ವಾದವನ್ನು ಪಡೆಯುವ ಪುಣ್ಯ ಶುಭವಸರದ ಕಾರ್ಯಕ್ರಮವೇ ಸಂಸ್ಥಾಪಕ ದಿನಾಚರಣೆಯಾಗಿದೆ. ಇದು ವಿದ್ಯಾರ್ಥಿಗಳಿಗೆ ಗುರು ಹಿರಿಯರನ್ನೂ ಗೌರವಿಸುವ ಸ್ಮರಿಸುವ ಮೌಲ್ಯಯುತ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಮುಖ್ಯ ಅಭ್ಯಾಗತರಾಗಿ ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕೆ. ಅನ್ನಪೂರ್ಣ ಕಾಮತ್ ರವರು ಭಾಗವಹಿಸಿ ಮಾತನಾಡುತ್ತಾ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಒಂದು ಆದರ್ಶ ಶಿಕ್ಷಣ ಸಂಸ್ಥೆಯೆಂದು ಹೆಗ್ಗಳಿಕೆಗೆ ಪಾತ್ರವಾದುದು ಶ್ರೀಮದ್ ಭುವನೇಂದ್ರ ವಿದ್ಯಾ ಸಂಸ್ಥೆ . ಇಂದಿಗೂ ಅದೇ ಮೌಲಿಕ ಶಿಕ್ಷಣ ಸಂಸ್ಕೃತಿ ಸಂಸ್ಕಾರ ನೀಡುತ್ತಲೇ ಬರುತ್ತಿದೆ. ಇಲ್ಲಿ ಯೋಗ್ಯ ಶಿಕ್ಷಣ ಪಡೆದ ಅದೆಷ್ಟೋ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಅಭಿಮಾನದ ಮಾತುಗಳನ್ನಾಡಿದರು.
ಇನ್ನೋರ್ವ ಮುಖ್ಯ ಅಭ್ಯಾಗತರಾದ ಹಿರಿಯ ಲೆಕ್ಕ ಪರಿಶೋಧಕರು ಕೆ ಕಮಲಾಕ್ಷ ಕಾಮತ್ ರವರು ಈ ವಿದ್ಯಾ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನಿರಂತರ ಶಿಕ್ಷಣ ನೀಡುತ್ತಾ ಬಂದು ಇಂದು ಸಂಸ್ಥೆಯು ಏರಿದ ಎತ್ತರ ಗಳಿಸಿದ ಕೀರ್ತಿ ನೀಡುವ ಉತ್ತಮ ಶಿಕ್ಷಣಕ್ಕೆ ಈ ಸಂಸ್ಥೆಯೂ ಎಲ್ಲೆಡೆ ಗೌರವವನ್ನು ಪಡೆದುಕೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಹನೀಯರು ದೀಪ ಪ್ರಜ್ವಲನೆ ಮಾಡಿ ಬಳಿಕ ಹಿರಿಯ ಚೇತನ ಸಂಸ್ಥಾಪಕ ಸ್ವರ್ಗೀಯ ಕುಕ್ಕುಂದೂರು ಸುಬ್ರಾಯ ಕಾಮತ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಆಶೀರ್ವಾದ ಬೇಡಿಕೊಂಡರು.
ವೇದಿಕೆಯಲ್ಲಿ ಶಾಲಾ ಸಂಚಾಲಕ ನರೇಂದ್ರ ಕಾಮತ್ ಕೆ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಜ್ಯೋತಿ ಜೆ ಪೈ ದಾನಿಗಳಾದ ಕೆ. ರವೀಂದ್ರ ಪ್ರಭು ಪ್ರೌಢ ಶಾಲಾ ಮುಖ್ಯ ಶಿಕ್ಷಕ ಆರ್. ನಾರಾಯಣ ಶೆಣೈ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಕಿಣಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ಶ್ರೀಮತಿ ಅನ್ನಪೂರ್ಣ ಕಾಮತ್ ಹಾಗೂ ಈ ಬಾರಿಯ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕ ಆರ್ ನಾರಾಯಣ ಶೆಣೈ ಯವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕಿ ನಯನಾ ಶೆಣೈ ಯವರು ಅಭಿನಂದನಾ ನುಡಿಗಳನ್ನಾಡಿದರು. ಹಾಗೆಯೇ ಕ್ರೀಡಾ ಭಾರತಿ ಕಾರ್ಕಳ ಇವರು ಆಯೋಜಿಸಿದ ಪುರಸಭಾ ವ್ಯಾಪ್ತಿಯ ಬಾಲಕರ ವಿಭಾಗದ ಕಬಡ್ಡಿ ಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಧಾರಿಣಿ ಉಪಾಧ್ಯರವರು ದಾನದ ಮಹತ್ವ ವಿಷಯದ ಕುರಿತಂತೆ ಮಾತಾಡಿದರು.
ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಲಕ್ಷ್ಮೀ ನಾಯಕ್ ನಿರೂಪಿಸಿ ಮುಖ್ಯ ಶಿಕ್ಷಕ ಆರ್. ನಾರಾಯಣ ಶೆಣೈಯವರು ಸ್ವಾಗತಿಸಿ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ವಿದ್ಯಾ ಕಿಣಿಯವರು ವಂದಿಸಿದರು. ಸಂಸ್ಥೆಯ ಯಶೋಗಾಥೆಯ ಪಕ್ಷಿ ನೋಟವನ್ನು ಶಿಕ್ಷಕ ಗಣೇಶ್ ಜಾಲ್ಸೂರು ವಾಚಿಸಿದರು. ಶಿಕ್ಷಕಿ ಭವ್ಯ ಕಿಣಿಯವರು ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳ ವಿವರ ನೀಡಿದರು. ಕಾರ್ಯಕ್ರಮವು ಐಕ್ಯ ಮಂತ್ರದೊಂದಿಗೆ ಸುಸಂಪನ್ನಗೊಂಡಿತು.
