ಬೆಂಗಳೂರು : ರಾಷ್ಟ್ರಗೀತೆ ಹಾಗೂ ದೇಶಭಕ್ತಿಗೀತೆಗಳ ಗಾಯನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸ್ಪಷ್ಟ ಮಾರ್ಗಸೂಚಿ ಹೊರಡಿಸಿದ್ದು, ರಾಜ್ಯ ಸರ್ಕಾರದ ಬಹುತೇಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಸೂಚಿಸಲಾಗಿದೆ. ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳಿಗೆ ಮಾತ್ರ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ.
ಸಚಿವ ಸಂಪುಟದ ನಿರ್ಧಾರದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಸರ್ಕಾರಿ ಕಾರ್ಯಕ್ರಮಗಳಲ್ಲಿ ಗೀತೆಯ ಗಾಯನ ಮತ್ತು ವಾದನದ ಸಂದರ್ಭದಲ್ಲಿ ಏಕರೂಪತೆ ಹಾಗೂ ಶಿಷ್ಟಾಚಾರವನ್ನು ಪಾಲಿಸುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
‘ವಂದೇ ಮಾತರಂ’ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಗೀತೆಯಾಗಿದ್ದು, ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಭಾವನೆ ಮೂಡಿಸುವಲ್ಲಿ ಮಹತ್ವದ ಸ್ಥಾನ ಹೊಂದಿದೆ. ಹೀಗಾಗಿ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪರಿಗಣಿಸಿ, ರಾಜ್ಯದ ಕಾರ್ಯಕ್ರಮಗಳ ಸ್ವರೂಪಕ್ಕೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇತ್ತೀಚೆಗೆ ‘ವಂದೇ ಮಾತರಂ’ ಗೀತೆಯ ಸಂಪೂರ್ಣ ಆವೃತ್ತಿ ಹಾಗೂ ಮೊದಲ ಎರಡು ಚರಣಗಳ ಗಾಯನಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಕರ್ನಾಟಕ ಸರ್ಕಾರದ ಈ ಆದೇಶ ಮಹತ್ವ ಪಡೆದಿದೆ. ರಾಜ್ಯ ಸರ್ಕಾರದ ನಿರ್ಧಾರ ಮುಂದಿನ ದಿನಗಳಲ್ಲಿ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

