ತುಳು ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ (ರಿ.) ಹಾಗೂ ಇದರ ಸಂಸ್ಥಾಪಕ ಮಹಿ ಮುಲ್ಕಿ , ಅಧ್ಯಕ್ಷ ನಿಶ್ಚಿತ್ ರಾಮಕುಂಜ, ಉಪಾಧ್ಯಕ್ಷ ಅಭಿಷೇಕ್, ಕಾರ್ಯದರ್ಶಿ ಸುಶಾನ್ ಕೋಟ್ಯಾನ್, ಹಣಕಾಸಿನ ನಿರ್ವಾಹಕ ಬ್ಲೆಸ್ಸನ್ ಕಾರ್ಡೋಸ, ಪುಣ್ಣಮೆ ಪ್ರಕಾಶನದ ಸಂಚಾಲಕ ಪೃಥ್ವಿರಾಜ್ ಎಂ.ಕೆ ಹಾಗೂ ಫೌಂಡೇಶನ್‌ನ ಸಮಸ್ತ ಸಂಚಾಲಕರ ಆಯೋಜಕತ್ವದಲ್ಲಿ ಸೆಪ್ಟೆಂಬರ್ 13, 2026 ರಂದು ಭಾನುವಾರ ಕಾರ್ಕಳದ ಶ್ರೀ ವೇಣುಗೋಪಾಲಕೃಷ್ಣ ಸಭಾಭವನದಲ್ಲಿ ‘ತೌಳವ ಯಕ್ಷಾಯನ’ ಮಹಾಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಯಶಸ್ಸಿಗಾಗಿ ತುಳುನಾಡು ವಾರ್ತೆ ಬಳಗವು ಡಿಜಿಟಲ್ ಮೀಡಿಯಾ ಪಾಲುದಾರರಾಗಿ ಕೈಜೋಡಿಸಿದೆ.
ಅಂದು ಮಧ್ಯಾಹ್ನ 2:00 ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮವನ್ನು ಕೇಮಾರು ಸಾಂದೀಪನಿ ಮಠದ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟಿಸಲಿದ್ದು,
ಫೌಂಡೇಶನ್ ಅಧ್ಯಕ್ಷರಾದ ನಿಶ್ಚಿತ್ ರಾಮಕುಂಜ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಂದಾರ ಶ್ರೀ ಕೇಶವ ಭಟ್ ಅವರ “ಭರತನ ಮೋಕೆ ಬೊಕ್ಕ ಮಾಯೊದ ಶೂರ್ಪನಕಿ” ಹಾಗೂ ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜ ಅವರ “ಕುಡಿಯನ ಕೊಂಬಿರೆಲ್” ತುಳು ಯಕ್ಷಗಾನ ಪ್ರಸಂಗ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.
ಜೊತೆಗೆ, ತುಳುನಾಡಿನ ಹಿರಿಯ ಯಕ್ಷಗಾನ ಕಲಾವಿದರಾದ ಕೊಳ್ತಿಗೆ ನಾರಾಯಣ ಗೌಡರು ‘ತುಳು ಯಕ್ಷಗಾನ ಬುಲೆದ್ ಬತ್ತಿನ ಸಾದಿ’ ಕುರಿತು ಮಾತನಾಡಲಿದ್ದಾರೆ ಜತೆಗೆ ‘ಬಾಮಕುಮಾರೆ ಗಣಪನ ಚಿತ್ರಕಲಾ ಪಂಥೊ’ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ಈ ಸಮಾರಂಭದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಪತ್ರಕರ್ತ ಮಂದಾರ ರಾಜೇಶ್ ಭಟ್ (ಅಧ್ಯಕ್ಷರು, ಮಂದಾರ ಪ್ರತಿಷ್ಠಾನ), ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲ್, ಗಾಯತ್ರಿ ಎಕ್ಸ್‌ಪೋರ್ಟ್ಸ್ ಸ್ಥಾಪಕ ಬೋಳ ಪ್ರಶಾಂತ್ ಕಾಮತ್, ತುಳುತ ಮಹಾಸಭೆ ರಾಜ್ಯ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ , ಅಂಬುರುಹ ಯಕ್ಷಸದನ ಪ್ರತಿಷ್ಠಾನದ ಅಧ್ಯಕ್ಷೆ ಶೋಭಾ ಪುರುಷೋತ್ತಮ್ ಪೂಂಜ, ಹಿರಿಯ ಕಲಾವಿದ ಡಾ. ತಾರಾನಾಥ್ ವರ್ಕಾಡಿ ಹಾಗೂ ಫೌಂಡೇಶನ್ ಸ್ಥಾಪಕ ಮಹಿ ಮುಲ್ಯ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಸಭಾ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಸಂಜೆ 4:00 ಗಂಟೆಯಿಂದ 6:30 ರವರೆಗೆ ಶ್ರೀ ಅನಂತರಾಮ ಬಂಗಾಡಿ ರಚಿತ ಪೌರಾಣಿಕ ತೆಲಿಕೆದಿಂಜಿ ಪ್ರಸಂಗ “ಸಿರಿಕೃಷ್ಣ ಚಂದಪಾಲಿ” ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಪ್ರಶಾಂತ್ ರೈ ಪಂಜ ಅವರ ಭಾಗವತಿಕೆಯಲ್ಲಿ ಮೂಡಿಬರಲಿರುವ ಈ ಯಕ್ಷಗಾನಕ್ಕೆ ಚಂದ್ರಶೇಖರ್ ಆಚಾರ್ಯ ಗುರುಮಾಯಿನಕರೆ ಚೆಂಡೆ, ರವಿ ಜೈನ್ ಕಾರ್ಕಳ ಮದ್ದಳೆ ಹಾಗೂ ರಂಜಿತ್ ಬಲಿಪ ಚಕ್ರತಾಳ ಸೇವೆ ಒದಗಿಸಲಿದ್ದಾರೆ. ಡಾ. ತಾರಾನಾಥ್ ವರ್ಕಾಡಿ, ತೆಲಿಕೆದರಸು ಸುಂದರ್ ಬಂಗಾಡಿ, ಕಲಾ ಸವ್ಯಸಾಚಿ ಪ್ರಶಾಂತ್ ಸಿ. ಕೆ., ಅರುಣ್ ಕೋಟ್ಯಾನ್, ಭುವನ್ ಶೆಟ್ಟಿ ಬೋಳಾರ್ ಮತ್ತು ನಿತೇಶ್ ವಾಮದಪದವು ಮುಂತಾದ ಖ್ಯಾತ ಕಲಾವಿದರು ರಂಗದಲ್ಲಿ ಅಭಿನಯಿಸಲಿದ್ದಾರೆ.
ತುಳು ನಾಡು-ನುಡಿಯ ಶ್ರೀಮಂತಿಕೆಯನ್ನು ಬಿಂಬಿಸುವ ಈ ಮಹಾಸಮ್ಮೇಳನಕ್ಕೆ ತುಳು ಭಾಷೆ, ಸಾಹಿತ್ಯ ಹಾಗೂ ಯಕ್ಷಗಾನಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಆಯೋಜಕರು ಕೋರಿದ್ದಾರೆ.
-ಮಂದಾರ ರಾಜೇಶ್

