ಕಾಪು : ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವುದು ಯಾರ ದಯೆಯೂ ಅಲ್ಲ, ಅದು ತುಳುವರ ಜನ್ಮಸಿದ್ಧ ಹಕ್ಕು ಎಂದು ತುಳುನಾಡು ರಕ್ಷಣಾ ವೇದಿಕೆ ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.
ಕರಾವಳಿ ಕರ್ನಾಟಕ, ಮಲೆನಾಡು ಹಾಗೂ ಗಡಿ ಪ್ರದೇಶಗಳಲ್ಲಿ ಕೋಟ್ಯಂತರ ಜನರ ಆಡುಭಾಷೆಯಾಗಿರುವ ತುಳು, ತನ್ನದೇ ಆದ ಲಿಪಿ, ಪಾರಂಪರಿಕ ಸಾಹಿತ್ಯ, ಜಾನಪದ ಪರಂಪರೆ ಹಾಗೂ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದೆ. ಇಂತಹ ಪ್ರಾಚೀನ ಹಾಗೂ ವೈಶಿಷ್ಟ್ಯಪೂರ್ಣ ಭಾಷೆಗೆ ಇಂದಿಗೂ ಅಧಿಕೃತ ಸ್ಥಾನಮಾನ ದೊರಕದಿರುವುದು ವಿಷಾದನೀಯ ಎಂದು ಅವರು ತಿಳಿಸಿದ್ದಾರೆ.
ತುಳು ಕೇವಲ ಸಂವಹನದ ಭಾಷೆಯಲ್ಲ. ಅದು ತುಳುನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆ, ಜಾನಪದ, ದೈವಾರಾಧನೆ, ಕಲೆ ಹಾಗೂ ಜನಜೀವನದ ಅವಿಭಾಜ್ಯ ಅಂಗವಾಗಿದೆ. ತುಳು ಭಾಷೆಯೊಂದಿಗೆ ತುಳುನಾಡಿನ ಅಸ್ಮಿತೆ ಮತ್ತು ಸ್ವಾಭಿಮಾನವೂ ಬೆಸೆದುಕೊಂಡಿದೆ. ಹೀಗಾಗಿ ತುಳುವಿಗೆ ಅಧಿಕೃತ ಸ್ಥಾನಮಾನ ಕಲ್ಪಿಸುವುದು ಕೇವಲ ಭಾಷೆಯ ವಿಚಾರವಲ್ಲ, ತುಳುನಾಡಿನ ಅಸ್ತಿತ್ವ ಮತ್ತು ಸಾಂಸ್ಕೃತಿಕ ಹಕ್ಕಿನ ಪ್ರಶ್ನೆಯಾಗಿದೆ ಎಂದು ಅವರು ಹೇಳಿದ್ದಾರೆ.
ಕಂಬಳ, ನಾಗಾರಾಧನೆ, ಭೂತಾರಾಧನೆ, ಯಕ್ಷಗಾನ, ಪಾಡ್ದನ, ಹುಲಿವೇಷ ಸೇರಿದಂತೆ ವಿಶ್ವದ ಗಮನ ಸೆಳೆದಿರುವ ಅನೇಕ ವಿಶಿಷ್ಟ ಜಾನಪದ ಕಲೆ ಮತ್ತು ಪರಂಪರೆಗಳು ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ಈ ಅಪೂರ್ವ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವುದು ಅತ್ಯಗತ್ಯವಾಗಿದೆ ಎಂದು ನಿತಿನ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
“ತುಳುವಿಗೆ ಅಧಿಕೃತ ಸ್ಥಾನಮಾನ ನೀಡುವುದು ಭಿಕ್ಷೆಯಲ್ಲ; ಅದು ನಮ್ಮ ಹಕ್ಕು. ಸಾವಿರಾರು ವರ್ಷಗಳ ಇತಿಹಾಸ, ಸ್ವಂತ ಲಿಪಿ, ಶ್ರೀಮಂತ ಸಾಹಿತ್ಯ ಮತ್ತು ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಹೊಂದಿರುವ ತುಳು ಭಾಷೆಗೆ ಸರ್ಕಾರ ನ್ಯಾಯಯುತ ಸ್ಥಾನಮಾನ ನೀಡಬೇಕು. ತುಳುನಾಡಿನ ಜನರ ಭಾವನೆ ಹಾಗೂ ದೀರ್ಘಕಾಲದ ಬೇಡಿಕೆಗೆ ಸರ್ಕಾರ ಗೌರವ ನೀಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ನಡೆಯಲಿರುವ ಸೆ.18ರ ಸಚಿವ ಸಂಪುಟ ಸಭೆಯಲ್ಲೇ ತುಳು ಭಾಷೆಯನ್ನು ಕರ್ನಾಟಕದ ದ್ವಿತೀಯ ಅಧಿಕೃತ ಭಾಷೆಯಾಗಿ ಘೋಷಿಸುವ ಕುರಿತು ಸರ್ಕಾರ ನಿರ್ಣಯ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದರೊಂದಿಗೆ ಶಾಲಾ-ಕಾಲೇಜುಗಳಲ್ಲಿ ತುಳು ಭಾಷೆಯ ಕಲಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸಿ, ತುಳು ಭಾಷೆ, ಸಾಹಿತ್ಯ, ಲಿಪಿ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಶಾಶ್ವತ ಯೋಜನೆ ರೂಪಿಸಬೇಕು ಎಂದು ತಿಳಿಸಿದ್ದಾರೆ.
ತುಳುನಾಡು ರಕ್ಷಣಾ ವೇದಿಕೆಯು ಕಳೆದ 17 ವರ್ಷಗಳಿಂದ ತುಳು ಭಾಷೆಯ ಅಧಿಕೃತ ಮಾನ್ಯತೆ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಇದೀಗ ಸೆ.18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತುಳುವಿಗೆ ದ್ವಿತೀಯ ಅಧಿಕೃತ ಭಾಷೆಯ ಸ್ಥಾನಮಾನ ಘೋಷಿಸಲಿದೆ ಎಂಬ ವಿಶ್ವಾಸವಿದೆ ಎಂದು ನಿತಿನ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ತುಳುನಾಡಿನ ಜನರ ಭಾವನೆಗಳಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಬೇಕು. ಈ ಮೂಲಕ ತುಳು ಭಾಷೆಗೆ ನ್ಯಾಯ ಒದಗಿಸುವುದರ ಜೊತೆಗೆ ತುಳುವರ ಬಹುಕಾಲದ ಕನಸನ್ನು ನನಸಾಗಿಸುವ ಮಹತ್ವದ ಹೆಜ್ಜೆ ಇಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
– ನಿತಿನ್ ಕುಮಾರ್ ಶೆಟ್ಟಿ
ಅಧ್ಯಕ್ಷರು, ತುಳುನಾಡು ರಕ್ಷಣಾ ವೇದಿಕೆ (ರಿ.), ಕಾಪು ತಾಲೂಕು

