ಶಾಸಕ ಸುನೀಲ್ ಕೊಲೆಗೆ ಪ್ರಚೋದನೆ: ವಿಕೃತ ವಿಡಿಯೋ ಹಾಕಿದ್ದ ಆರೋಪಿ ವಶಕ್ಕೆ

0
12

ಉಡುಪಿ: ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನೀಲ್ ಕುಮಾರ್ ಅವರ ತಲೆ ಕತ್ತರಿಸಿದಂತೆ ಎಡಿಟ್ ಮಾಡಿದ ಫೋಟೋ ಬಳಸಿ, ಕೊಲೆಗೆ ಪ್ರಚೋದನೆ ನೀಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಕೃತ ವಿಡಿಯೋ ಹಂಚಿಕೊಂಡಿದ್ದ ಆರೋಪಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಪ್ರಸಾದ್ ಶೆಟ್ಟಿ ಎಂಬಾತ ತನ್ನ ಫೇಸ್‌ಬುಕ್ ಖಾತೆಯಲ್ಲಿ ಶಾಸಕ ಸುನೀಲ್ ಕುಮಾರ್ ಅವರ ತಲೆ ಕತ್ತರಿಸಿರುವ ಫೋಟೋ ಬಳಸಿ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದ್ದ. ಅದಕ್ಕೆ ಹಿನ್ನೆಲೆ ಧ್ವನಿಯಾಗಿ “ಸುನೀಲ್ ಕುಮಾರ ರವರ ಪೋಟೋಗೆ ಇದನ್ನೆಲ್ಲಾ ಕಣ್ಣಿನಿಂದ ನೋಡಿ ಕಂಗಾಲು ಆಗಿ ಬಿಟ್ಟಿದ್ದೀನಿ, ಬೇಕಣ್ಣ ಈ ಲೋಫರ್ ನನ್ನ ಮಗನ ತಲೆ ಬೇಕೆ ಬೇಕು” ಎಂದು ಹೇಳುತ್ತಾ, ಸಿನೆಮಾದ ‘ಹೊಡಿ ಮಗ ಹೊಡಿ ಮಗ’ ಎಂಬ ಹಾಡನ್ನು ಸೇರಿಸಿ ವಿಡಿಯೋ ಎಡಿಟ್ ಮಾಡಿದ್ದ. ಜನಪ್ರತಿನಿಧಿಯೊಬ್ಬರ ತಲೆ ತೆಗೆಯಬೇಕು, ಹೊಡೆಯಬೇಕು ಎಂದು ಸಾರ್ವಜನಿಕರನ್ನು ಕೊಲೆಗೆ ಪ್ರಚೋದಿಸುವ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಪೋಸ್ಟ್ ಹಾಕಲಾಗಿತ್ತು. ಈ ವಿಕೃತ ಪೋಸ್ಟ್ ಗಮನಿಸಿದ ಕಾರ್ಕಳ ತಾಲೂಕಿನ ವಿಘ್ನೇಶ್ ಪ್ರಸಾದ್ ರಾವ್ ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಪ್ರಸಾದ್ ಶೆಟ್ಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.