ಪಾಲಡ್ಕ,: ಪವಿತ್ರ ಕನ್ಯಾಮರಿಯಮ್ಮನ ಜನ್ಮದಿನದ ಸ್ಮರಣಾರ್ಥ ಆಚರಿಸುವ ಮೊಂತಿ ಹಬ್ಬವನ್ನು ಪಾಲಡ್ಕದ ಸಂತ ಇಗ್ನೆಶಿಯಸ್ ಚರ್ಚ್‌ನಲ್ಲಿ ಸೆಪ್ಟೆಂಬರ್ 8 ರಂದು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಪವಿತ್ರ ಬಲಿಪೂಜೆಗೆ ಮುನ್ನ ಹಬ್ಬದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಚರ್ಚಿನ ಆಟದ ಮೈದಾನದ ವೇದಿಕೆಯ ಮುಂಭಾಗದಲ್ಲಿ ಸಮಸ್ತ ಭಕ್ತಾದಿಗಳು ಹೊಸ ಫಸಲಿನ ಆಶೀರ್ವಾದಕ್ಕಾಗಿ ಒಟ್ಟುಗೂಡಿದರು. ನಮ್ಮ ಪಾರಂಪರಿಕ ಸಂಪ್ರದಾಯದಂತೆ, ಹೊಸ ಫಸಲಿನ ಮೊದಲ ಫಲಗಳನ್ನು ದೇವರಿಗೆ ಅರ್ಪಿಸಿ ಆಶೀರ್ವದಿಸಲಾಯಿತು.
ವಿಶೇಷವಾಗಿ ಮಕ್ಕಳು ವಿವಿಧ ಬಣ್ಣಗಳ ಸುಂದರ ಹೂಗಳನ್ನು ತಂದಿದ್ದು, ಬಾಲೆ ಮರಿಯಮ್ಮನಿಗೆ ಭಕ್ತಿಪೂರ್ವಕವಾಗಿ ಅರ್ಪಿಸಿದರು. ಹೂವಿನ ಅರ್ಪಣೆಯ ಈ ಸುಂದರ ಸಂಪ್ರದಾಯವು ಇಡೀ ವಾತಾವರಣವನ್ನು ಭಕ್ತಿಮಯಗೊಳಿಸಿತು.
ಹೂ ಅರ್ಪಣೆಯ ಬಳಿಕ, ಆಟದ ಮೈದಾನದಿಂದ ದೇವಾಲಯದ ವರೆಗೆ ಭಕ್ತಿಪೂರ್ವಕ ಮೆರವಣಿಗೆ ನಡೆಯಿತು. ಬಾಲೆ ಮರಿಯಮ್ಮನ ಮೂರ್ತಿಯನ್ನು ಗೌರವದಿಂದ ಹೊತ್ತುಕೊಂಡು ಸ್ತುತಿಗಾನಗಳೊಂದಿಗೆ ದೇವಾಲಯವನ್ನು ತಲುಪಿತು.
ನಂತರ ಚರ್ಚಿನಲ್ಲಿ ಮೊಂತಿ ಹಬ್ಬದ ವಿಶೇಷ ಪವಿತ್ರ ಬಲಿಪೂಜೆ ನೆರವೇರಿತು. ದೇವರು ನೀಡಿದ ಪ್ರಕೃತಿಯ ವರಗಳಿಗೆ ಕೃತಜ್ಞತೆ ಸಲ್ಲಿಸುವುದರ ಜೊತೆಗೆ, ಕುಟುಂಬಗಳಲ್ಲಿ ಪ್ರೀತಿ, ಒಗ್ಗಟ್ಟು ಮತ್ತು ಸಮೃದ್ಧಿ ನೆಲೆಸಲೆಂದು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.
ಧರ್ಮಗುರುಗಳಾದ ವಂದನೀಯ ಪಾವ್ಲ್ ಕ್ರಾಸ್ತ ರವರಿಂದ ಹಬ್ಬದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು.

