ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಕೊಡಂಗೆ ಎಂಬಲ್ಲಿ ಕಳೆದ 3 ವರ್ಷಗಳ ಹಿಂದೆ ನಿರ್ಮಾಣಗೊಂಡ ಸುಸಜ್ಜಿತ ವೀರ-ವಿಕ್ರಮ ಜೋಡುಕರೆಯಲ್ಲಿ ಇದೀಗ ಪ್ರತೀ ಶನಿವಾರ ಮತ್ತು ಭಾನುವಾರ ಓಟದ ಕೋಣಗಳ ತರಬೇತಿಗೆ ‘ಕುದಿ ಕಂಬಳ’ ನಡೆಸಲು ಮುಕ್ತ ಅವಕಾಶ ನೀಡಲಾಗಿದೆ. ಈ ಎರಡು ದಿನಗಳಲ್ಲಿ ಕಂಬಳ ಕರೆಯಲ್ಲಿ ನೀರು ಸಹಿತ ಸಂಪೂರ್ಣ ಸುಸಜ್ಜಿತವಾಗಿರಲಿದ್ದು, ಓಟದ ಕೋಣಗಳಿಗೆ ಅಭ್ಯಾಸ ನಡೆಸಲು ಅನುಕೂಲಕರವಾಗಿರುತ್ತದೆ.
ಕುದಿ ಕಂಬಳ ನಡೆಸಲು ಕೋಣಗಳ ಯಜಮಾನರು ಇದರ ಸೌಲಭ್ಯ ಪಡೆದುಕೊಳ್ಳಬಹುದು. ಈಗಾಗಲೇ ಕೇವಲ 3 ವರ್ಷಗಳಲ್ಲಿ 6 ಕಂಬಳ ನಡೆಸಿದ ಹೆಗ್ಗಳಿಕೆ ಕೊಡಂಗೆ ಕಂಬಳ ಕರೆ ಹೊಂದಿದೆ ಎಂದು ಜಿಲ್ಲಾ ಕಂಬಳ ಸಮಿತಿ ಕೋಶಾಧಿಕಾರಿ, ಕೊಡಂಗೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ತಿಳಿಸಿದ್ದಾರೆ.

