‘ಮನ್ಸ’ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸಲು ಆಗ್ರಹ

0
11

ಸೆ.18ರ ಮಂಗಳೂರು ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಮೂಲದ ‘ಮನ್ಸ’ ಸಮುದಾಯವನ್ನು ಸರ್ಕಾರದ ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರ್ಪಡೆಗೊಳಿಸಿ, ಸಮುದಾಯಕ್ಕೆ ಸಾಮಾಜಿಕ ನ್ಯಾಯ ಹಾಗೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ‘ಮನ್ಸ’ ಸಮುದಾಯದ ಸಂಘಟನೆ ಆಗ್ರಹಿಸಿದೆ.

ದಕ್ಷಿಣ ಕನ್ನಡ ಮೂಲದ ಈ ಸಮುದಾಯದ ಜನರು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ನೆಲೆಸಿದ್ದು, ಸಮುದಾಯದ ಜನಸಂಖ್ಯೆ ಐದು ಲಕ್ಷಕ್ಕೂ ಅಧಿಕವಾಗಿದೆ ಎಂದು ಸಂಘಟನೆ ತಿಳಿಸಿದೆ. ಆದರೆ ‘ಮನ್ಸ’ ಎಂಬ ಮೂಲ ಜಾತಿಯ ಹೆಸರು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗದಿರುವುದರಿಂದ ಸಮುದಾಯದವರು ತಮ್ಮದಲ್ಲದ ಜಾತಿ ಹೆಸರುಗಳ ಅಡಿಯಲ್ಲಿ ಜಾತಿ ಪ್ರಮಾಣಪತ್ರ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದೆ.

ಸಮುದಾಯವು ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಶತಮಾನಗಳಿಂದ ಹಿಂದುಳಿದಿದ್ದು, ಮೂಲ ಜಾತಿ ‘ಮನ್ಸ’ ಹೆಸರನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆ ಆರೋಪಿಸಿದೆ.

ಇದೀಗ ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗಿರುವ ಹಿನ್ನೆಲೆಯಲ್ಲಿ, ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗದ ಸಮುದಾಯಗಳಿಗೆ ಮತ್ತಷ್ಟು ಅನ್ಯಾಯವಾಗುವ ಸಾಧ್ಯತೆ ಇದೆ. ಒಳಮೀಸಲಾತಿ ಸಂಬಂಧಿಸಿದ ಆದೇಶದಲ್ಲಿ ಪಟ್ಟಿಯಲ್ಲಿ ಇಲ್ಲದ ಅಸ್ಪೃಶ್ಯ ಜಾತಿಗಳನ್ನು ನಿಯಮಾನುಸಾರ ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಂಡು ಎಲ್ಲ ಸಮುದಾಯಗಳಿಗೂ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಸೂಚಿಸಲಾಗಿತ್ತು. ಆದರೆ ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.

‘ಮನ್ಸ’ ಜಾತಿಯ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಕಡತ ಸಿದ್ಧವಾಗಿದ್ದರೂ, ಸಂಬಂಧಿಸಿದ ಇಲಾಖೆಯ ಸಚಿವರು ಇನ್ನೂ ಆದೇಶಕ್ಕೆ ಸಹಿ ಮಾಡದೆ ಕಡತವನ್ನು ನೆನೆಗುದಿಗೆ ಹಾಕಲಾಗಿದೆ ಎಂದು ಸಂಘಟನೆ ಆರೋಪಿಸಿದೆ.

ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ‘ಮನ್ಸ’ ಜಾತಿಯ ಕುಲಶಾಸ್ತ್ರೀಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಆದ್ಯತೆಯ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಮಾಜ ಕಲ್ಯಾಣ ಸಚಿವರನ್ನು ಪ್ರಶ್ನಿಸಿ, ಸಮುದಾಯದ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಸಹಕರಿಸಬೇಕು ಎಂದು ಸಂಘಟನೆ ಮನವಿ ಮಾಡಿದೆ.

ಪತ್ರಿಕಾಗೋಷ್ಠಿಯಲ್ಲಿ ಗೌರವ ಅಧ್ಯಕ್ಷ ಎಂ. ಶಾಂತರಾಮ್, ಅಧ್ಯಕ್ಷ ವೆಂಕಣ್ಣ ಕೊಯ್ಯಾರು, ಉಪಾಧ್ಯಕ್ಷ ಹರಿಯಪ್ಪ ಮುತ್ತೂರು, ಗೌರವ ಸಲಹೆಗಾರ ಅಚ್ಯುತ ಸಂಪಿಗೆ, ಪ್ರಧಾನ ಕಾರ್ಯದರ್ಶಿ ಉದಯ ಗೋಳಿಯಂಗಡಿ, ಸಂಘಟನಾ ಕಾರ್ಯದರ್ಶಿ ಎಂ. ರಮೇಶ್ ಬೋಧಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ಆನಂದ ಕೊಪ್ಪ ಉಪಸ್ಥಿತರಿದ್ದರು.