ಸೆ.18ರ ಮಂಗಳೂರು ಸಚಿವ ಸಂಪುಟ ಸಭೆಯಲ್ಲೇ ತುಳು ಭಾಷೆಗೆ ಮಾನ್ಯತೆ ಘೋಷಿಸಲಿ: ತುಳುನಾಡ ರಕ್ಷಣಾ ವೇದಿಕೆ ಆಗ್ರಹ

0
10

“ಇನ್ನು ಭರವಸೆ ಬೇಡ, ಸ್ಪಷ್ಟ ನಿರ್ಧಾರ ಬೇಕು” — ಫ್ರ್ಯಾಂಕಿ ಡಿಸೋಜ

ಉಡುಪಿ: ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲೇ ತುಳು ಭಾಷೆಗೆ ಕರ್ನಾಟಕದ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡುವ ಕುರಿತು ಐತಿಹಾಸಿಕ ನಿರ್ಧಾರ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಆಗ್ರಹಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಬೇಡಿಕೆ ಹಲವು ವರ್ಷಗಳಿಂದ ಮುಂದುವರಿದಿದ್ದು, ಈ ಬಾರಿ ನಡೆಯಲಿರುವ ಮಂಗಳೂರು ಸಚಿವ ಸಂಪುಟ ಸಭೆಯು ಈ ಬೇಡಿಕೆಗೆ ಸ್ಪಷ್ಟ ದಿಕ್ಕು ನೀಡುವ ಪ್ರಮುಖ ಅವಕಾಶವಾಗಿದೆ ಎಂದು ಹೇಳಿದರು. ಸೆ.18ರ ಸಭೆ ತುಳುನಾಡಿನ ಜನರ ಪಾಲಿಗೆ ಮಹತ್ವದ ದಿನವಾಗಿದ್ದು, ಸರ್ಕಾರ ಕೇವಲ ಮನವಿ ಸ್ವೀಕರಿಸುವುದು ಅಥವಾ ಭರವಸೆ ನೀಡುವುದಕ್ಕೆ ಸೀಮಿತವಾಗದೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತುಳು ಕೇವಲ ಸಂವಹನದ ಭಾಷೆಯಲ್ಲ. ತುಳುನಾಡಿನ ಇತಿಹಾಸ, ಸಂಸ್ಕೃತಿ, ಜನಪದ, ಸಾಹಿತ್ಯ, ಕಲೆ, ಆಚರಣೆ, ಭೂತಾರಾಧನೆ, ನಾಗಾರಾಧನೆ, ಯಕ್ಷಗಾನ, ಕಂಬಳ ಸೇರಿದಂತೆ ಇಲ್ಲಿನ ಸಾಂಸ್ಕೃತಿಕ ಪರಂಪರೆಯೊಂದಿಗೆ ತುಳು ಭಾಷೆ ಅವಿನಾಭಾವ ಸಂಬಂಧ ಹೊಂದಿದೆ. ಹೀಗಾಗಿ ಭಾಷೆಗೆ ಆಡಳಿತಾತ್ಮಕ ಸ್ಥಾನಮಾನ ದೊರೆಯುವುದು ತುಳುನಾಡಿನ ಜನರ ಬಹುಕಾಲದ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.

ತುಳು ಮಾತನಾಡುವ ಜನರು ಕರ್ನಾಟಕದ ಕರಾವಳಿ ಭಾಗಗಳಷ್ಟೇ ಅಲ್ಲದೆ ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಲ್ಲಿಯೂ ನೆಲೆಸಿದ್ದಾರೆ. ಇಂತಹ ಭಾಷೆಗೆ ಸೂಕ್ತ ಆಡಳಿತಾತ್ಮಕ ಸ್ಥಾನಮಾನ ದೊರೆಯಬೇಕೆಂಬ ಬೇಡಿಕೆಯನ್ನು ಹಲವು ವರ್ಷಗಳಿಂದ ಸರ್ಕಾರದ ಗಮನಕ್ಕೆ ತರಲಾಗುತ್ತಿದೆ ಎಂದು ಫ್ರಾಂಕಿ ಡಿಸೋಜ ಹೇಳಿದರು.

ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂಬ ಆಗ್ರಹ ಇತ್ತೀಚಿನ ದಿನಗಳಲ್ಲಿ ವಿವಿಧ ಸಂಘಟನೆಗಳಿಂದಲೂ ವ್ಯಕ್ತವಾಗುತ್ತಿದೆ.

“ಇನ್ನು ಮನವಿ ಮಾಡುತ್ತಾ ಕೂರುವುದಿಲ್ಲ. ಈ ಬಾರಿ ಸರ್ಕಾರ ನಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ವಿಶ್ವಾಸವಿದೆ. ಒಂದು ವೇಳೆ ಮತ್ತೆ ವಿಳಂಬ ಅಥವಾ ನೆಪ ಹೇಳಿದರೆ ಮುಂದಿನ ದಿನಗಳಲ್ಲಿ ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು” ಎಂದು ಫ್ರಾಂಕಿ ಡಿಸೋಜ ಎಚ್ಚರಿಸಿದ್ದಾರೆ.

ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಬೇಡಿಕೆ ಸೆ.18ರ ಸಚಿವ ಸಂಪುಟ ಸಭೆಯ ಮುನ್ನ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲೂ ಚರ್ಚೆಯಲ್ಲಿದೆ.