ಮೂಡುಬಿದಿರೆಯ ಮಾಜಿ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ

0
18

ಧಾರವಾಡ: ಮೂಡುಬಿದಿರೆಯಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿ, ಬಳಿಕ ಧಾರವಾಡಕ್ಕೆ ವರ್ಗಾವಣೆಗೊಂಡಿದ್ದ ಸಚ್ಚಿದಾನಂದ ಕುಚನೂರು ಅವರು 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಧಾರವಾಡ ತಾಲೂಕಿನ ಯೆರಗೊಪ್ಪ ಗ್ರಾಮದ 33 ಎಕರೆ ಜಮೀನಿನ ಪೈಕಿ 13 ಎಕರೆ ಭೂಮಿಯನ್ನು ಬಿ.ಕರಾಬ್‌ನಿಂದ ಸರಿಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕುಚನೂರು ಅವರು 50 ಲಕ್ಷ ರೂ. ನಗದು ಹಾಗೂ ಎರಡು ಎಕರೆ ಜಮೀನು ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಲಂಚದ ಹಣವನ್ನು ಧಾರವಾಡದ ಕರ್ನಾಟಕ ಕಾಲೇಜು ಆವರಣಕ್ಕೆ ತಂದು ನೀಡುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೂರುದಾರರು ಲೋಕಾಯುಕ್ತ ಪೊಲೀಸರೊಂದಿಗೆ ಹಣದೊಂದಿಗೆ ಸ್ಥಳಕ್ಕೆ ತೆರಳಿದ್ದರು. ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಸಚ್ಚಿದಾನಂದ ಕುಚನೂರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣವು ಧಾರವಾಡದಲ್ಲಿ ನಡೆದಿರುವ ಪ್ರಮುಖ ಲಂಚ ಪ್ರಕರಣಗಳಲ್ಲಿ ಒಂದಾಗಿದೆ ಎಂದು ತಿಳಿದುಬಂದಿದೆ. ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಡಿವೈಎಸ್ಪಿ ರವೀಂದ್ರ ಕುರುಬಗಟ್ಟಿ, ಇನ್ಸ್‌ಪೆಕ್ಟರ್ ಪ್ರಸಾದ್, ಕರುಣೇಶ್ ಗೌಡ ಹಾಗೂ ಪ್ರಸಾದ್ ಪಾನೇಕರ್ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.