ಉಚ್ಚಿಲ: ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲ ಹಾಗೂ ಉಡುಪಿ ಉಚ್ಚಿಲ ದಸರಾ ಸಮಿತಿ ಆಶ್ರಯದಲ್ಲಿ ಉಚ್ಚಿಲ ದಸರಾ ಉತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ಆಹ್ವಾನಿತ ತಂಡಗಳ ಪುರುಷರ ಹುಲಿ ಕುಣಿತ ಸ್ಪರ್ಧೆ ‘ಅಬ್ಬರದ ಪಿಲಿ ಪಂಥ 2026 – ಸೀಸನ್ 1’ ಆಯೋಜಿಸಲಾಗಿದೆ.

ಅಕ್ಟೋಬರ್ 18ರಂದು ಬೆಳಿಗ್ಗೆ 10.30ರಿಂದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಉತ್ಸವದ ಮುಖ್ಯ ವೇದಿಕೆಯಲ್ಲಿ ಸ್ಪರ್ಧೆ ನಡೆಯಲಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರತಿಷ್ಠಿತ 10 ಆಹ್ವಾನಿತ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ₹3 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನಕ್ಕೆ ₹2 ಲಕ್ಷ ನಗದು ಹಾಗೂ ಟ್ರೋಫಿ ಮತ್ತು ತೃತೀಯ ಸ್ಥಾನಕ್ಕೆ ₹1 ಲಕ್ಷ ನಗದು ಹಾಗೂ ಟ್ರೋಫಿ ನೀಡಲಾಗುವುದು. ಅಲ್ಲದೆ, ಮೂರು ವೈಯಕ್ತಿಕ ವಿಭಾಗಗಳಲ್ಲಿ ತಲಾ ₹10 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೂ ₹25 ಸಾವಿರ ಪ್ರೋತ್ಸಾಹಧನ ನೀಡಲಾಗುವುದು.
ಕರಾವಳಿ ಕರ್ನಾಟಕದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯಾಗಿರುವ ಹುಲಿ ಕುಣಿತ ಕಲೆಗೆ ಹೊಸ ವೇದಿಕೆ ಹಾಗೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜನಪದ ಹಾಗೂ ಸಾಂಸ್ಕೃತಿಕ ಕಲೆಯ ಬೆಳವಣಿಗೆಗೆ ಸಹಕಾರ ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.

