ಮಕ್ಕಳ ಸುರಕ್ಷತೆಗೆ ‘ಶಾಲಾ ವಲಯ–ನಿಧಾನವಾಗಿ ಚಲಿಸಿ’ ಫಲಕ ಅಳವಡಿಕೆ

0
21

ಪರ್ಕಳ: ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಜೆಸಿಐ ಪರ್ಕಳದ ವತಿಯಿಂದ ರಾಷ್ಟ್ರೀಯ ಹೆದ್ದಾರಿ 169Aರ ಶಾಲಾ ವಲಯದಲ್ಲಿ ‘SCHOOL ZONE – GO SLOW’ ಸಂಚಾರ ಸೂಚನಾ ಫಲಕವನ್ನು ಅಳವಡಿಸಲಾಯಿತು.

ವಲಯಾಧ್ಯಕ್ಷರ ಅಧಿಕೃತ ಭೇಟಿಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜೆಸಿಐ ವಲಯ 15ರ ವಲಯಾಧ್ಯಕ್ಷ ಜೆಎಫ್‌ಎಸ್ ಸಂತೋಷ್ ಶೆಟ್ಟಿ ಅವರು ಫಲಕವನ್ನು ಲೋಕಾರ್ಪಣೆಗೊಳಿಸಿದರು.

ಶಾಲಾ ವಲಯದಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸುವುದು ಹಾಗೂ ರಸ್ತೆ ದಾಟುವ ವಿದ್ಯಾರ್ಥಿಗಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಫಲಕವನ್ನು ಅಳವಡಿಸಲಾಗಿದೆ. ಶಾಲಾ ಸಮಯದಲ್ಲಿ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸಿ ನಿಧಾನವಾಗಿ ಸಂಚರಿಸುವಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಜೆಸಿಐ ಪರ್ಕಳ ಕೈಗೊಂಡಿದೆ.

‘ವೇಗಕ್ಕಿಂತ ಜೀವ ಮುಖ್ಯ; ನಿಧಾನವಾಗಿ ಚಲಿಸಿ, ಮಕ್ಕಳನ್ನು ಸುರಕ್ಷಿತವಾಗಿರಿಸಿ’ ಎಂಬ ಸಂದೇಶದೊಂದಿಗೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಜೆಸಿಐ ಪರ್ಕಳದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.