
ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ 2025–26ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.20ರಂದು ಗುರುವಾಯನಕೆರೆ ಕುಲಾಲ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಯಾದವ ಮೂಲ್ಯ ಮುಂಡೂರು ಅಧ್ಯಕ್ಷತೆ ವಹಿಸಿ, ದೀಪ ಪ್ರಜ್ವಲಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬೆಳ್ತಂಗಡಿ ತಾಲೂಕಿನಲ್ಲಿ ಕುಲಾಲ ಸಮಾಜವನ್ನು ಮತ್ತಷ್ಟು ಸಂಘಟಿಸುವ ಅಗತ್ಯವಿದೆ. ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಸಂಘಟನೆಯಿಂದ ಮಾತ್ರ ಸಮಾಜಕ್ಕೆ ಶಕ್ತಿ ದೊರೆಯಲಿದ್ದು, ‘ನಮ್ಮ ಸಂಘ’ ಎಂಬ ಅಭಿಯಾನದ ಮೂಲಕ ಸಂಘದ ಶ್ರೇಯಸ್ಸಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ನೂತನ ಕುಲಾಲ ಸಮುದಾಯ ಭವನ ನಿರ್ಮಾಣಕ್ಕೆ ಸಮಾಜದ ಎಲ್ಲರ ಸಂಪೂರ್ಣ ಸಹಕಾರ ಅಗತ್ಯವಿದೆ. ಭವನ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ಸದಸ್ಯರು ಹಾಗೂ ಸಮಾಜ ಬಾಂಧವರು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ಸುಧೀರ್ ಕೆ.ಎನ್. ಅವರು 2025–26ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು. ಕೋಶಾಧಿಕಾರಿ ದಿನೇಶ್ ಮಾಲಾಡಿ ಅವರು ಲೆಕ್ಕಪತ್ರ ಮಂಡಿಸಿದ್ದು, ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.
ಸಭೆಯಲ್ಲಿ ಸಂಘದ ಜಾಗ ಖರೀದಿಗಾಗಿ ಪಡೆದಿರುವ ರೂ.44 ಲಕ್ಷ ಸಾಲವನ್ನು ಮರುಪಾವತಿಸುವ ಕುರಿತು ಚರ್ಚೆ ನಡೆಯಿತು. ಇದೇ ವೇಳೆ ನೂತನ ಸಮುದಾಯ ಭವನ ನಿರ್ಮಾಣದ ಬಗ್ಗೆಯೂ ಸಮಗ್ರ ಚರ್ಚೆ ನಡೆಸಿ, ಸದಸ್ಯರಿಂದ ವಿವಿಧ ಸಲಹೆ-ಸೂಚನೆಗಳನ್ನು ಪಡೆಯಲಾಯಿತು.
ನೂತನ ಸದಸ್ಯರ ಆಯ್ಕೆ
ಸಂಘದ ಕಾರ್ಯಕಾರಿ ಸಮಿತಿಗೆ ನೂತನ ಸದಸ್ಯರಾಗಿ ಸುಜಾತ ಮಚ್ಚಿನ, ವಿಶ್ವನಾಥ ನಡುಬೊಟ್ಟು, ಶಶಿಧರ ಮಡಂತ್ಯಾರು, ಹೊನ್ನಯ್ಯ ಮೂಲ್ಯ ಕುತ್ತಿನ, ದಿನೇಶ್ ಮೂಲ್ಯ ನಡುಬೊಟ್ಟು, ಉದಯ ಬಿ.ಕೆ. ಬಂದಾರು, ನಾರಾಯಣ ಮೂಲ್ಯ ಇಡ್ಯ, ಹಿಮಪ್ರಭಾ ಜಿ.ಕೆರೆ, ಲಲಿತಾ, ವಿಶ್ವನಾಥ ಬರಾಯ ಹಾಗೂ ಜಯಂತಿ ಮಚ್ಚಿನ ಅವರನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಸಂಘದ ಹಿರಿಯರಾದ ವಿಶ್ವನಾಥ ಮೂಲ್ಯ ವರಕಬೆ, ಗೌರವಾಧ್ಯಕ್ಷ ಹರೀಶ್ ಕಾರಿಂಜ, ಉಪಾಧ್ಯಕ್ಷ ಲೋಕೇಶ್ ಕುಲಾಲ್, ಯುವ ವೇದಿಕೆ ಅಧ್ಯಕ್ಷ ಅನಿನಾಶ್ ಕುಲಾಲ್ ಮಾಣೂರು, ಮಹಿಳಾ ವೇದಿಕೆ ಅಧ್ಯಕ್ಷೆ ಸುಮಲತಾ ಹಾಗೂ ಸದಸ್ಯ ಯತೀಶ್ ಸಿರಿಮಜಲು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎನ್. ಅತಿಥಿ-ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಬ್ರಹ್ಮ ಎಂ.ಜಿ. ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಗೌರವಾಧ್ಯಕ್ಷ ಹರೀಶ್ ಕಾರಿಂಜ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸಂದೇಶ್ ಕುಮಾರ್ ವಂದಿಸಿದರು.
