ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಗೆ ರಜತ ಸಂಭ್ರಮ

0
7

ವಿಕಸಿತ ಭಾರತಕ್ಕೆ ಗ್ರಾಮ ವಿಕಾಸ ಮುನ್ನುಡಿ: ಗುರುದೇವಾನಂದ ಸ್ವಾಮೀಜಿ

ಬಂಟ್ವಾಳ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ನೇತೃತ್ವದಲ್ಲಿ ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ರಜತ ಸಂಭ್ರಮ ಸಮಿತಿ ಹಾಗೂ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಗ್ರಾಮ ವಿಕಾಸ ರಜತ ಸಂಭ್ರಮ’ ಕಾರ್ಯಕ್ರಮ ಭಾನುವಾರ ಒಡಿಯೂರು ಕ್ಷೇತ್ರದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಚಾಲನೆ ನೀಡಿ ಆಶೀರ್ವಚನ ನೀಡಿದರು. ಗ್ರಾಮವಿಕಾಸ ಯೋಜನೆ 2001ರಲ್ಲಿ ಆರಂಭಗೊಂಡಿದ್ದು, 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ರಜತ ಸಂಭ್ರಮ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಗುರುದೇವಾನಂದ ಸ್ವಾಮೀಜಿ, “ವಿಕಸಿತ ಭಾರತಕ್ಕೆ ಗ್ರಾಮ ವಿಕಾಸ ಮುನ್ನುಡಿಯಾಗಿದೆ” ಎಂದು ಹೇಳಿದರು. ಆಧ್ಯಾತ್ಮಿಕ ತಳಹದಿಯ ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯವಾಗುತ್ತದೆ. ಗ್ರಾಮವಿಕಾಸ ಯೋಜನೆ ಇಂದು ಬೆಳೆದು ನಿಂತಿರುವ ಹಿಂದೆ ಹಲವರ ಪರಿಶ್ರಮ, ತ್ಯಾಗ ಮತ್ತು ಸೇವಾ ಮನೋಭಾವವಿದೆ ಎಂದು ತಿಳಿಸಿದರು.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವುದು ತುಳುವರಿಗೆ ಸಂತಸದ ಹಾಗೂ ಐತಿಹಾಸಿಕ ಕ್ಷಣವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ರಜತ ಸಂಭ್ರಮ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಡಿಯೂರು ಕ್ಷೇತ್ರದ ಗ್ರಾಮವಿಕಾಸ ಯೋಜನೆಯ ಮೂಲಕ ಸಾವಿರಾರು ಬಡ ಕುಟುಂಬಗಳಿಗೆ ವಿವಿಧ ರೀತಿಯ ಸೇವೆ ಹಾಗೂ ನೆರವು ದೊರೆಯುತ್ತಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಪತ್ರಕರ್ತ ಯಶು ವಿಟ್ಲ ಸಂಪಾದಕತ್ವದ ‘ರಜತ ವಿಕಾಸ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಒಡಿಯೂರು ಶ್ರೀಗಳ ತುಳು ಲಿಪಿಯ ಭಗವದ್ಗೀತೆಯನ್ನು ಅತಿಥಿಗಳಿಗೆ ವಿತರಿಸಲಾಯಿತು. ಮುಂಬೈ ಸರ್ಜನ್ ಡಾ. ಅದಿಕ್ ಕೆ. ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ 25 ವರ್ಷಗಳ ಸಾಧನೆ ಮತ್ತು ಸೇವಾ ಕಾರ್ಯಗಳ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವರಾದ ಬಿ. ರಮಾನಾಥ ರೈ, ಬಿ. ನಾಗರಾಜ ಶೆಟ್ಟಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಉದ್ಯಮಿ ಸುಗ್ಗಿ ಸುಧಾಕರ್ ಶೆಟ್ಟಿ ಹುಬ್ಬಳ್ಳಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರನ್ನು ಸನ್ಮಾನಿಸಲಾಯಿತು.

ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಿದರು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಅವರು ಮುಂದಿನ ದಿನಗಳಲ್ಲಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿಯಬೇಕು ಎಂದು ಹೇಳಿದರು.

ವಾಮಯ ಶೆಟ್ಟಿ ಮುಂಬೈ, ದಾಮೋದರ್ ಶೆಟ್ಟಿ ಮುಂಬೈ, ಪ್ರಭಾಕರ್ ಶೆಟ್ಟಿ ಪುಣೆ, ಸಹಕಾರಿ ರತ್ನ ಸುರೇಶ್ ರೈ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ರವಿರಾಜ್ ಶೆಟ್ಟಿ ಒಡಿಯೂರು ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ನಡೆಯಿತು.

ಪತ್ರಕರ್ತ ಯಶು ವಿಟ್ಲ ಸ್ವಾಗತಿಸಿದರು. ಮಾತೇಶ್ ಭಂಡಾರಿ ವಂದಿಸಿದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.