ಜಪ್ಪಿನಮೊಗರು ಶ್ರೀ ಗಣೇಶೋತ್ಸವ ರಾಜ್ಯಕ್ಕೆ ಮಾದರಿ- ಯುಟಿ ಖಾದರ್ ಫರೀದ್

0
6

ಜಪ್ಪಿನಮೊಗರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ 18ನೇ ವರ್ಷದ ಜಪ್ಪಿನಮೊಗರು ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವು ಕರ್ಮಯೋಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಫರೀದ್, ಜಪ್ಪಿನಮೊಗರು ಗಣೇಶೋತ್ಸವವು ಧಾರ್ಮಿಕ ಸೌಹಾರ್ದತೆ ಹಾಗೂ ಪರಸ್ಪರ ಸಹಬಾಳ್ವೆಗೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಜಪ್ಪಿನಮೊಗರು ಗಣೇಶೋತ್ಸವದ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದ ವ್ಯಕ್ತಿಯೊಬ್ಬರು ಹಲವು ವರ್ಷಗಳಿಂದ ಹಸಿರು ತೆನೆಯನ್ನು ಬೆಳೆಸಿ ಸಾರ್ವಜನಿಕರಿಗೆ ನೀಡುತ್ತಿರುವುದು, ಮೂರು ದಿನಗಳ ಕಾಲ ಸಾವಿರಾರು ಭಕ್ತರಿಗೆ ನಡೆಯುವ ಅನ್ನದಾನ ಸೇವೆಗೆ ಮುಸ್ಲಿಂ ಸಮುದಾಯದ ಯೆನಪೋಯ ಸಂಸ್ಥೆಯ ಕುಲಪತಿ ಯೆನಪೋಯ ಅಬ್ದುಲ್ ಕುಂಞ ಹಾಗೂ ದಿ. ಲ್ಯಾನ್ಸಿ ಡಿಸೋಜಾ ಅವರ ಕುಟುಂಬಸ್ಥರು ಸಹಕಾರ ನೀಡುತ್ತಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದರು.

ಅದೇ ರೀತಿ ಗಣೇಶೋತ್ಸವದ ಶೋಭಾಯಾತ್ರೆ ಸಂದರ್ಭದಲ್ಲಿ ಜಪ್ಪಿನಮೊಗರು ಜುಮ್ಮಾ ಮಸೀದಿಯ ಸದಸ್ಯರು ಪಾನೀಯ ಹಾಗೂ ಫಲಾಹಾರದ ವ್ಯವಸ್ಥೆ ಮಾಡುತ್ತಿರುವುದು ಮತ್ತು ಎಲ್ಲಾ ಧರ್ಮಗಳ ಪ್ರಮುಖರನ್ನು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಹ್ವಾನಿಸುತ್ತಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ ಎಂದು ಯು.ಟಿ. ಖಾದರ್ ಹೇಳಿದರು.

ಜಪ್ಪಿನಮೊಗರು ಗಣೇಶೋತ್ಸವವು ಧಾರ್ಮಿಕ ಸೌಹಾರ್ದತೆ, ಸಹೋದರತ್ವ ಹಾಗೂ ಪರಸ್ಪರ ಸಹಕಾರದ ಸಂದೇಶವನ್ನು ಸಾರುತ್ತಿದೆ. ನಾವೆಲ್ಲರೂ ಒಂದೇ ಮನಸ್ಸಿನಿಂದ ಗಣೇಶ ದೇವರನ್ನು ಪೂಜಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮವನ್ನು ಶ್ರೀಮತಿ ಶೈಲಜಾ ಮಹಾಬಲ ಶೆಟ್ಟಿ ತಾರ್ದೋಲ್ಯ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಸುರೇಂದ್ರ ಕಂಬಳಿ ಅಡ್ಯಾರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಅದಾನಿ ಸಂಸ್ಥೆಗಳ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್ ಆಳ್ವ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೆಣವ, ಸಂಸ್ಕೃತ ಭಾರತಿಯ ಉಪಾಧ್ಯಕ್ಷರು ಹಾಗೂ ಜ್ಯೋತಿಷಿ ಅನಿಲ್ ಕುಮಾರ್ ಪಂಡಿತ್, ಉದ್ಯಮಿ ದಾಮೋದರ್ ಶೆಟ್ಟಿ ತಾರ್ದೋಲ್ಯ, ಉದ್ಯಮಿ ಮಹಾಬಲ ಕೊಟ್ಟಾರಿ, ಶೈಲೇಶ್ ಸುವರ್ಣ, ಉದ್ಯಮಿ ಲಯನ್ ಹರೀಶ್ ಆಳ್ವ, ರತನ್ ಕುಮಾರ್ ಶೆಟ್ಟಿ ಕಾಪಿಕಾಡ್, ಗಂಗಾಧರ್ ಪದವಿನಂಗಡಿ, ಜಿಲ್ಲಾ ಗ್ರಂಥಾಲಯ ಅಧಿಕಾರಿ ಮಮತಾ ರಮೇಶ್ ಶೆಟ್ಟಿ, ಬಿಂದಿಯಾ ಯೋಗೀಶ್ ಶೆಟ್ಟಿ ಮಣ್ಣಗುಡ್ಡೆ, ಸಂತೋಷ್ ಶೆಟ್ಟಿ ಕಡೇಕಾರ್, ಲಯನ್ಸ್ ರವಿಕುಮಾರ್ ಎಂ.ಎಸ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಸ್ಥಳೀಯರಾದ ಡಾ. ರ್ಮಿಳಾ ಪಿ. ನಾಯಕ್ ಹಾಗೂ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ನ ಸುಪರ್ ಟ್ಯಾಲೆಂಟೆಡ್ ಕಿಡ್ ಪ್ರಶಸ್ತಿ ಪಡೆದ ಒಂದೂವರೆ ವರ್ಷದ ಬಾಲಕಿ ಕುಮಾರಿ ಚರ್ವಿ ಡಿ. ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಸಮಿತಿಯ ಅಧ್ಯಕ್ಷ ಜೆ. ನಾಗೇಂದ್ರ ಕುಮಾರ್ ಸ್ವಾಗತಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ್ ಜೆ. ವಂದಿಸಿದರು. ಮಲ್ಲಿಕಾ ಭಾನುಪ್ರಕಾಶ್ ಹಾಗೂ ಹರೀಶ್ ಶೆಟ್ಟಿ ತಾರ್ದೋಲ್ಯ ಕಾರ್ಯಕ್ರಮ ನಿರೂಪಿಸಿದರು.