ಸಂಜೆಯ ಹೊತ್ತಿನಲ್ಲಿ ತಣ್ಣನೆಯ ಗಾಳಿ ಮೈಗೆ ತಾಕಿದಾಗ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು ಎನ್ನಿಸುವುದು ಸಹಜ. ಪ್ರತಿಬಾರಿ ಆನ್‌ಲೈನ್‌ನಲ್ಲಿ ತಿಂಡಿ ಆರ್ಡರ್ ಮಾಡುವ ಅಥವಾ ಬೀದಿಬದಿಯ ತಿಂಡಿಗಳನ್ನು ಸೇವಿಸುವ ಬದಲು ಮನೆಯಲ್ಲೇ ರುಚಿಕರವಾದ ತಿಂಡಿಗಳನ್ನು ತಯಾರಿಸಿಕೊಂಡರೆ ಶುಚಿ ಹಾಗೂ ರುಚಿಯ ಜೊತೆಗೆ ಮನೆಯವರೊಂದಿಗೆ ಸವಿಯಬಹುದು.
ಮೊಮೊಸ್ ಇತ್ತೀಚಿನ ದಿನಗಳಲ್ಲಿ ಹಲವರ ನೆಚ್ಚಿನ ತಿಂಡಿಯಾಗಿದೆ. ಸಾಮಾನ್ಯವಾಗಿ ರಸ್ತೆ ಬದಿ ಅಂಗಡಿಗಳು ಹಾಗೂ ಹೋಟೆಲ್‌ಗಳಲ್ಲಿ ಸಿಗುವ ಮೊಮೊಸ್‌ನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಿ ಸವಿಯಬಹುದು. ಅದರಲ್ಲೂ ಸ್ವಲ್ಪ ಮಸಾಲೆಯೊಂದಿಗೆ ಫ್ರೈ ಮಾಡಿದ ಮೊಮೊಸ್ ರುಚಿ ಇನ್ನಷ್ಟು ಹೆಚ್ಚಿಸುತ್ತದೆ.
ಬೇಕಾಗುವ ಸಾಮಗ್ರಿಗಳು
ಮೊಮೊಸ್‌ಗಾಗಿ:
- ಮೈದಾ ಹಿಟ್ಟು – 1 ಕಪ್
- ಉಪ್ಪು – ರುಚಿಗೆ ತಕ್ಕಷ್ಟು
- ಎಲೆಕೋಸು – 1 ಕಪ್
- ಪನೀರ್ – 8–10 ತುಂಡು
- ಈರುಳ್ಳಿ – 1
- ಸೋಯಾ ಸಾಸ್ – 1 ಚಮಚ
- ಕಾಳುಮೆಣಸಿನ ಪುಡಿ – 1 ಚಮಚ
- ಶುಂಠಿ–ಬೆಳ್ಳುಳ್ಳಿ ಪೇಸ್ಟ್ – ಅಗತ್ಯಕ್ಕೆ
- ಕೊತ್ತಂಬರಿ ಸೊಪ್ಪು – ಅಗತ್ಯಕ್ಕೆ
- ಎಣ್ಣೆ – ಅಗತ್ಯಕ್ಕೆ
ಮಸಾಲೆಗಾಗಿ:
- ಮೊಸರು – 2 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಅರಿಶಿನ – 1 ಚಮಚ
- ಗರಂ ಮಸಾಲೆ – ಅಗತ್ಯಕ್ಕೆ
- ಶುಂಠಿ–ಬೆಳ್ಳುಳ್ಳಿ ಪೇಸ್ಟ್ – ಅಗತ್ಯಕ್ಕೆ
- ಎಣ್ಣೆ – ಅಗತ್ಯಕ್ಕೆ
ಮಾಡುವ ವಿಧಾನ
ಮೊದಲು ಒಂದು ಕಪ್ ಮೈದಾ ಹಿಟ್ಟಿಗೆ ನೀರು ಹಾಗೂ ಚಿಟಿಕೆ ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲಸಿಕೊಳ್ಳಿ. ಹಿಟ್ಟನ್ನು ಸ್ವಲ್ಪ ಸಮಯ ಮುಚ್ಚಿಟ್ಟು ಬಿಡಿ.
ನಂತರ ಎಲೆಕೋಸನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಕಡಾಯಿಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿದ ಬಳಿಕ ಪನೀರ್ ತುಂಡುಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ಎಲೆಕೋಸು ಸೇರಿಸಿ ಹುರಿಯಿರಿ.
ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸಿನ ಪುಡಿ ಹಾಗೂ ಸೋಯಾ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬೇಕಿದ್ದರೆ ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು. ಒಂದೆರಡು ನಿಮಿಷ ಬೇಯಿಸಿದ ಬಳಿಕ ಒಲೆಯನ್ನು ಆರಿಸಿ ಮಿಶ್ರಣವನ್ನು ತಣ್ಣಗಾಗಲು ಬಿಡಿ.
ಇನ್ನೊಂದೆಡೆ ಕಲಸಿಟ್ಟ ಮೈದಾ ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಪೂರಿಯಷ್ಟು ತೆಳುವಾಗಿ ವೃತ್ತಾಕಾರದಲ್ಲಿ ಲಟ್ಟಿಸಿಕೊಳ್ಳಿ. ಅದರ ಮಧ್ಯದಲ್ಲಿ ತಯಾರಿಸಿದ ಎಲೆಕೋಸು–ಪನೀರ್ ಮಿಶ್ರಣವನ್ನು ಹಾಕಿ ಮೊಮೊಸ್ ಆಕಾರದಲ್ಲಿ ಮಡಚಿಕೊಳ್ಳಿ.
ಬಳಿಕ ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ, ಅದರ ಮೇಲೆ ಆವಿ ಬರುವ ರೀತಿಯಲ್ಲಿ ರಂಧ್ರವಿರುವ ಪಾತ್ರೆ ಅಥವಾ ಜಾಲರಿ ಇಡಿ. ಅದರ ಮೇಲೆ ತಯಾರಿಸಿದ ಮೊಮೊಸ್‌ಗಳನ್ನು ಇಟ್ಟು ಸುಮಾರು ಐದು ನಿಮಿಷ ಆವಿಯಲ್ಲಿ ಬೇಯಿಸಿಕೊಳ್ಳಿ.
ಮಸಾಲೆ ತಯಾರಿ
ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು, ಅರಿಶಿನ, ಗರಂ ಮಸಾಲೆ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಆವಿಯಲ್ಲಿ ಬೆಂದ ಮೊಮೊಸ್‌ಗಳನ್ನು ಈ ಮಿಶ್ರಣಕ್ಕೆ ಹಾಕಿ ಎಲ್ಲೆಡೆ ಮಸಾಲೆ ಹಚ್ಚುವಂತೆ ನಿಧಾನವಾಗಿ ಕಲಸಿಕೊಳ್ಳಿ. ಸುಮಾರು 10 ನಿಮಿಷ ಹಾಗೆಯೇ ಇಡಬೇಕು.
ನಂತರ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿದ ಬಳಿಕ ಮಸಾಲೆಯಲ್ಲಿ ಇಟ್ಟಿರುವ ಮೊಮೊಸ್‌ಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ. ಮೊಮೊಸ್‌ಗಳು ಹೊಂಬಣ್ಣಕ್ಕೆ ತಿರುಗಿ ಹೊರಭಾಗ ಸ್ವಲ್ಪ ಗರಿಗರಿಯಾದಾಗ ಒಲೆಯಿಂದ ಇಳಿಸಬಹುದು.
ರುಚಿಕರವಾದ ಡ್ರೈ ಫ್ರೈಡ್ ಮೊಮೊಸ್ ಸವಿಯಲು ಸಿದ್ಧ. ಸಂಜೆ ಸಮಯದಲ್ಲಿ ಕುಟುಂಬದವರೊಂದಿಗೆ ಬಿಸಿ ಬಿಸಿಯಾಗಿ ಸವಿಯಲು ಇದು ಉತ್ತಮ ತಿಂಡಿಯಾಗಲಿದೆ.

