ಎಸ್ ಎನ್ ಎಂ ಪಾಲಿಟೆಕ್ನಿಕ್ ಮೂಡುಬಿದಿರೆ : ನಿರ್ಮಾಣ್–2026

0
25

ಮೂಡುಬಿದಿರೆ: ಎಸ್ಎನ್ ಮೂಡಬಿದ್ರಿ ಪಾಲಿಟೆಕ್ನಿಕ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಇಂಜಿನಿಯರ್ಸ್ ಡೇ ಅಂಗವಾಗಿ ‘ನಿರ್ಮಾಣ್–2026’ ಹೆಸರಿನಲ್ಲಿ ಸೆಪ್ಟೆಂಬರ್ 21ರಿಂದ 23ರವರೆಗೆ ಮೂರು ದಿನಗಳ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಮೊದಲ ದಿನವಾದ ಸೆಪ್ಟೆಂಬರ್ 21ರಂದು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮಂಗಳೂರು ವತಿಯಿಂದ ಅತಿಥಿ ಉಪನ್ಯಾಸವನ್ನು ಆಯೋಜಿಸಲಾಯಿತು. ಆಧುನಿಕ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಹಾಗೂ ಮಳೆ ನೀರಿನ ಕೊಯ್ಲು ವಿಷಯದ ಕುರಿತು ದ. ಕ. ನಿರ್ಮಿತಿ ಕೇಂದ್ರದ ಕಾರ್ಯನಿರ್ವಹಣಾ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿ, ಎ ಸಿ ಸಿ ಇ ಮಂಗಳೂರು ಇದರ ವಿಕ್ರಮ್ ಶೆಟ್ಟಿ ಹಾಗೂ ಅರುಣ್ ರಾಜ್ ಅವರು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ಆಧುನಿಕ ತ್ಯಾಜ್ಯ ನಿರ್ವಹಣಾ ವಿಧಾನಗಳು ಹಾಗೂ ಮಳೆನೀರು ಕೊಯ್ಲಿನ ಮಹತ್ವ, ಪ್ರಾಯೋಗಿಕ ಅಳವಡಿಕೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರದ ಕುರಿತು ಅವರು ವಿವರಿಸಿದರು.

ಎರಡನೇ ದಿನವಾದ ಸೆಪ್ಟೆಂಬರ್ 22ರಂದು ತ್ಯಾಜ್ಯ ನಿರ್ವಹಣಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಕಾಲೇಜಿನ ಪ್ರತಿಯೊಂದು ತರಗತಿಗೆ ತೆರಳಿ ತ್ಯಾಜ್ಯ ವಿಂಗಡಣೆ, ತ್ಯಾಜ್ಯ ನಿರ್ವಹಣೆ, ಮರುಬಳಕೆ ಹಾಗೂ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಇದೇ ದಿನ ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆಯ ವಾಣಿಜ್ಯ ವಿಭಾಗದ ಉಪನ್ಯಾಸಕಿ ಬಿ. ವಿಜೇತ ಕಾಮತ್ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಉಪನ್ಯಾಸ ನೀಡಿದರು. ‘ಕಲಿಕೆಯಾಚೆಗೆ – ಕೌಶಲ್ಯ, ಅವಕಾಶ ಮತ್ತು ಯಶಸ್ಸಿನ ಪಯಣ’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳು ಶೈಕ್ಷಣಿಕ ಜ್ಞಾನಕ್ಕೆ ಸೀಮಿತವಾಗದೆ ತಮ್ಮ ಕೌಶಲ್ಯ, ವೃತ್ತಿ ಸಾಮರ್ಥ್ಯ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಅಗತ್ಯವನ್ನು ತಿಳಿಸಿದರು.

ಮೂರನೇ ದಿನವಾದ ಸೆಪ್ಟೆಂಬರ್ 23ರಂದು ವಿದ್ಯಾರ್ಥಿಗಳಿಗೆ ತಾಂತ್ರಿಕ ಸ್ಥಳಗಳಿಗೆ ಭೇಟಿ ಆಯೋಜಿಸಲಾಯಿತು. ಗಂಜಿಮಠದ ಪೂಂಜಾ ಟೈಲ್ ಫ್ಯಾಕ್ಟರಿ ಹಾಗೂ ಸುರತ್ಕಲ್‌ನ ಡಿ.ಕೆ. ನಿರ್ಮಿತಿ ಕೇಂದ್ರಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿ ಕೈಗಾರಿಕಾ ಉತ್ಪಾದನಾ ಪ್ರಕ್ರಿಯೆ, ನಿರ್ಮಾಣ ಸಾಮಗ್ರಿಗಳ ತಯಾರಿಕೆ ಹಾಗೂ ನಿರ್ಮಾಣ ಕ್ಷೇತ್ರದ ವಿವಿಧ ಪ್ರಾಯೋಗಿಕ ಚಟುವಟಿಕೆಗಳ ಕುರಿತು ನೇರ ಅನುಭವವನ್ನು ಪಡೆದರು.

ಮೂರು ದಿನಗಳ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನ, ಪರಿಸರ ಜಾಗೃತಿ, ವ್ಯಕ್ತಿತ್ವ ವಿಕಸನ ಹಾಗೂ ಕೈಗಾರಿಕಾ ಅನುಭವವನ್ನು ಒದಗಿಸುವ ಮೂಲಕ ತರಗತಿಯ ಕಲಿಕೆಯನ್ನು ಪ್ರಾಯೋಗಿಕ ಅನುಭವದೊಂದಿಗೆ ಜೋಡಿಸಿತು.
ಎಲ್ಲಾ ಕಾರ್ಯಕ್ರಮಗಳಲ್ಲಿ ವಿಭಾಗ ಮುಖ್ಯಸ್ಥರಾದ ಗೋಪಾಲಕೃಷ್ಣ ಕೆ. ಎಸ್., ಸಿವಿಲ್ ಕ್ಲಬ್ ಸಂಯೋಜಕಿ ತೇಜಸ್ವಿನಿ ಆರ್. ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.