ಪುತ್ತೂರಿನಲ್ಲಿ ಬಲಿಪ ಪ್ರಸಾದ ಭಾಗವತರ ಸಂಸ್ಮರಣೆ : ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರಿಗೆ 14ನೇ ಸನ್ಮಾನ

0
7

ಪುತ್ತೂರು: ಇಲ್ಲಿನ ಸೈಂಟ್ ಫಿಲೋಮಿನಾ ಕಾಲೇಜಿನ ಪಿ.ಜಿ. ವಿಭಾಗದ ಸಭಾಂಗಣದಲ್ಲಿ ಬಲಿಪ ಪ್ರಸಾದ ಭಾಗವತ 50ರ ನೆನಪು “ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್” ಸರಣಿಯ 14ನೇ ಕಾರ್ಯಕ್ರಮವು ಸೆ. 23ರಂದು ಅಪರಾಹ್ನ ಜರಗಿತು.

ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬಲಿಪ ಪ್ರಸಾದರೊಂದಿಗೆ 14 ವರ್ಷಗಳ ಕಾಲ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದ್ದ ಸುದೀರ್ಘ ಕಾಲದ ಒಡನಾಡಿ, ಒಟ್ಟು 38 ವರ್ಷಗಳ ತಿರುಗಾಟದ ಅನುಭವವಿರುವ ಹನುಮಗಿರಿ ಮೇಳದ ಪ್ರಸಿದ್ಧ ಕಲಾವಿದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರಿಗೆ ಸರಣಿಯ 14ನೇ ಸನ್ಮಾನವನ್ನು ನೀಡಿ ಗೌರವಿಸಲಾಯಿತು.

ಖ್ಯಾತ ಯಕ್ಷಗಾನ ಸಂಘಟಕ, ಮೂಡುಬಿದಿರೆ ಯಕ್ಷಸಂಗಮದ ಅಧ್ಯಕ್ಷ ಎಂ. ಶಾಂತರಾಮ ಕುಡ್ವ ಬಲಿಪ ಪ್ರಸಾದರ ಸಂಸ್ಮರಣೆಗೈದರು. ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್ ಸರಣಿ ಕಾರ್ಯಕ್ರಮದ ಗೌರವ ಸಲಹೆಗಾರ ಅಳಿಯೂರು ರುಕ್ಕಯ್ಯ ಪೂಜಾರಿ ನಿಗದಿಯಾಗಿರುವ ಸರಣಿಯ ಮುಂದಿನ ಕಾರ್ಯಕ್ರಮಗಳ ವಿವರ ನೀಡಿದರು. ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ರಿಚರ್ಡ್ ಕರ್ಡೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಲ. ಆಲ್ವಿನ್ ಮಿನೇಜಸ್ ಗಂಟಾಲ್ಕಟ್ಟೆ ಸನ್ಮಾನಪತ್ರ ವಾಚಿಸಿದರು.
ಸರಣಿ ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಫರ್ಫಾರ್ಮಿಂಗ್ ಆರ್ಟ್ಸ್ ಅಸೋಸಿಯೇಶನ್ ಸಂಯೋಜಕ ಪ್ರೊ. ಪ್ರಶಾಂತ್ ರೈ ಸ್ವಾಗತಿಸಿದರು. ಹಿರಿಯ ಯಕ್ಷಗುರು ಅನಂತ ಪದ್ಮನಾಭ ಹೊಳ್ಳ, ವಾಸ್ತು ತಜ್ಞ ಮಾರೂರು ರಾಘವೇಂದ್ರ ಭಂಡಾರ್ಕಾರ್, ಪತ್ರಕರ್ತೆ ಪ್ರೇಮಾಶ್ರೀ ಅತಿಥಿಗಳನ್ನು ಗೌರವಿಸಿದರು. ಕಾಲೇಜಿನ ರಿಜಿಸ್ಟ್ರಾರ್ ಡಾ. ನೋರ್ಬರ್ಟ್ ಮಸ್ಕರೇನಸ್, ನಿವೃತ್ತ ಪೊಲೀಸ್ ಅಧಿಕಾರಿ ವಾಸು ನಾಯ್ಕ, ಸಂಸ್ಕೃತ ಅಧ್ಯಾಪಕ ವೆಂಕಟೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಪ್ರೊ. ಪ್ರಶಾಂತ್ ರೈ ಅವರ ಭಾಗವತಿಕೆಯಲ್ಲಿ “ಗುರುದಕ್ಷಿಣೆ” ತಾಳಮದ್ದಳೆ ಜರಗಿತು. ಏಕಲವ್ಯನಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಮತ್ತು ದ್ರೋಣಾಚಾರ್ಯ ಪಾತ್ರದಲ್ಲಿ ವೆಂಕಟೇಶ್ ಭಟ್ ವಿಜ್ರಂಭಿಸಿದರು.