ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಕಾರಾಗೃಹ ಇಲಾಖೆಯಲ್ಲಿ ಹುದ್ದೆ

0
42

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಿಂದ ನೇಮಕಾತಿ ಅವಕಾಶ ಕಲ್ಪಿಸಲಾಗಿದೆ. 2026ನೇ ಸಾಲಿನ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಒಟ್ಟು 293 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ನೇಮಕಾತಿಯಲ್ಲಿ ಜೈಲರ್, ವಾರ್ಡರ್, ದ್ವಿತೀಯ ದರ್ಜೆ ಬೋಧಕರು ಹಾಗೂ ವಾರ್ಡರ್ ಕಮ್ ನರ್ಸಿಂಗ್ ಸೇರಿದಂತೆ ವಿವಿಧ ಹುದ್ದೆಗಳು ಒಳಗೊಂಡಿವೆ. 10ನೇ ತರಗತಿಯಿಂದ ಪದವಿ ಹಂತದವರೆಗೆ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಹುದ್ದೆಗಳ ವಿವರ

  • ಜೈಲರ್: 5 ಹುದ್ದೆಗಳು
  • ವಾರ್ಡರ್: 275 ಹುದ್ದೆಗಳು
  • ದ್ವಿತೀಯ ದರ್ಜೆ ಬೋಧಕರು: 8 ಹುದ್ದೆಗಳು
  • ವಾರ್ಡರ್ ಕಮ್ ನರ್ಸಿಂಗ್: 5 ಹುದ್ದೆಗಳು

ಒಟ್ಟು 293 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಅಥವಾ ಪದವಿ ಸೇರಿದಂತೆ ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 20 ವರ್ಷ ಹಾಗೂ ಗರಿಷ್ಠ ವಯೋಮಿತಿ 33 ವರ್ಷ ಎಂದು ತಿಳಿಸಲಾಗಿದೆ. ಸರ್ಕಾರದ ನಿಯಮಾನುಸಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ವೇತನ

ಹುದ್ದೆಗೆ ಅನುಗುಣವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.34,100ರಿಂದ ರೂ.1,12,900ರವರೆಗೆ ವೇತನ ಶ್ರೇಣಿ ದೊರೆಯಲಿದೆ.

ಜೈಲರ್ ಹುದ್ದೆಗೆ ರೂ.61,300ರಿಂದ ರೂ.1,12,900, ವಾರ್ಡರ್ ಹಾಗೂ ದ್ವಿತೀಯ ದರ್ಜೆ ಬೋಧಕರಿಗೆ ರೂ.37,500ರಿಂದ ರೂ.76,100 ಹಾಗೂ ವಾರ್ಡರ್ ಕಮ್ ನರ್ಸಿಂಗ್ ಹುದ್ದೆಗೆ ರೂ.34,100ರಿಂದ ರೂ.67,600 ವೇತನ ಶ್ರೇಣಿ ನಿಗದಿಯಾಗಿದೆ ಎಂದು ತಿಳಿಸಲಾಗಿದೆ.

ಅರ್ಜಿ ಶುಲ್ಕ

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.750, ಪ್ರವರ್ಗ 2ಎ, 2ಬಿ, 3ಎ ಹಾಗೂ 3ಬಿ ಅಭ್ಯರ್ಥಿಗಳಿಗೆ ರೂ.75 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ರೂ.500 ಶುಲ್ಕ ನಿಗದಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳ ಆಯ್ಕೆಯು ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ಸೇರಿದಂತೆ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಪ್ರಕ್ರಿಯೆಯ ಮೂಲಕ ನಡೆಯಲಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಕೆ ಸೆ.19, 2026ರಿಂದ ಆರಂಭವಾಗಿದ್ದು, ಅ.15, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು ನೀಡಲಾದ ಮಾಹಿತಿಯಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆವಾರು ಶೈಕ್ಷಣಿಕ ಅರ್ಹತೆ, ವಯೋಮಿತಿ, ಶುಲ್ಕ, ಪರೀಕ್ಷಾ ವಿಧಾನ ಹಾಗೂ ಇತರ ಷರತ್ತುಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸುವುದು ಅಗತ್ಯ.