ನವಗಿರಿ ಕಲ್ಯಾಣ ಮಂಟಪದಲ್ಲಿ ಯುವ ಚೇತನದ ವಾರ್ಷಿಕೋತ್ಸವ

0
98

ನವಗಿರಿ ಸೇವಾ ಟ್ರಸ್ಟ್‌ನ ಬ್ರಾಹ್ಮಣ ಯುವ ಸಂಘಟನೆಯಾದ ಯುವ ಚೇತನ ಹೊಸಬೆಟ್ಟು, ಕುಳಾಯಿ ಇದರ 33ನೇ ವಾರ್ಷಿಕೋತ್ಸವವು ನವಗಿರಿ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವೇದಮೂರ್ತಿ ನಂದಪ್ರಸಾದ ನಡೆಸಿ ನಿತ್ಯ ಜಪತಪಾನುಷ್ಟಾನಗಳೇ ಬ್ರಾಹ್ಮಣ್ಯದ ರಕ್ಷಣೆ ಮತ್ತು ಬ್ರಾಹ್ಮಣನ ಏಳಿಗೆಗೆ ಕಾರಣ ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಗರಿ ಸಮೂಹ ಸಂಸ್ಥೆಯ ಮಾಲಕರಾದ ಅಗಿರಿ ರಾಘವೇಂದ್ರ ರಾವ್ ವಹಿಸಿದ್ದು ಯಾವುದೇ ಮೀಸಲಾತಿ ಸೌಲಭ್ಯವಿಲ್ಲದೇ ಸಮಾಜದಲ್ಲಿ ಸ್ವಸಾಮರ್ಥ್ಯದಿಂದ ಬೆಳೆದ ಸಮಾಜ ಅದು ಬ್ರಾಹ್ಮಣ ಸಮಾಜ ಎಂದರು.

ವೇದಮೂರ್ತಿ ಸುಬ್ರಹ್ಮಣ್ಯ ಮಯ್ಯ ಅವರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ವಿದ್ಯಾಗಮ ಟ್ರಸ್ಟ್ ಸುರತ್ಕಲ್‌ನ ಸಂಸ್ಥಾಪಕ ಅಧ್ಯಕ್ಷರಾದ ಪಣಂಬೂರು ವಾಸುದೇವ ಐತಾಳ್, ಅದಾನಿ ಪವರ್ ಲಿಮಿಟೆಡ್‌ನ Electrical Dept H.O.D. ರವಿಚಂದ್ರ ಮೈರ್ಪಾಡಿ, ಹಾಗೂ ವನಿತಾ ಸಮಾಜ ಹೊಸಬೆಟ್ಟುವಿನ ಅಧ್ಯಕ್ಷರಾದ ಸಾವಿತ್ರಿ ಎಚ್. ಭಟ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪಣಂಬೂರು ವಾಸುದೇವ ಐತಾಳ್, ಮಾತನಾಡಿ ಯುವ ಚೇತನದ 33 ವರ್ಷಗಳ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿ, ಯುವಜನರನ್ನು ಸಂಘಟಿಸುವುದರ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವ ಸಂಘದ ಕಾರ್ಯವನ್ನು ಪ್ರಶಂಸಿಸಿದರು. ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಯುವ ಪೀಳಿಗೆಗೆ ಉತ್ತಮ ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

SSLC ಮತ್ತು II PUC ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಒಟ್ಟು 21 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಲ್ವರು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ‘ಭಲೇ ಜೋಡಿ Season–5’ ಸ್ಪರ್ಧೆಯಲ್ಲಿ ಹಲವಾರು ಜೋಡಿಗಳು ಭಾಗವಹಿಸಿದ್ದು, ಪ್ರೇಕ್ಷಕರ ಗಮನ ಸೆಳೆಯಿತು. ಸ್ಪರ್ಧೆಯಲ್ಲಿ ಅನಿಲ್ ಮತ್ತು ರಾಗಶ್ರೀ ಜೋಡಿ ಪ್ರಥಮ ಬಹುಮಾನ, ಶರತ್ ಮತ್ತು ಶ್ರೀವಿದ್ಯಾ ಜೋಡಿ ರನ್ನರ್-ಅಪ್ ಸ್ಥಾನ ಪಡೆದರು. ವಿಜೇತರಿಗೆ ಹಾಗೂ ರನ್ನರ್-ಅಪ್ ಜೋಡಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಸಂತ ರಾಜ್ ಅವರ ಪ್ರಾರ್ಥಿಸಿದರು . ಪವನ್ ಮೈರ್ಪಾಡಿ ನಿರೂಪಣೆ ಮಾಡಿದರು. ಶ್ರೀನಿವಾಸ ಕುಳಾಯಿ ಸ್ವಾಗತಿಸಿದರು. ಸಂಘದ ವಾರ್ಷಿಕ ವರದಿಯನ್ನು ವಿಕ್ರಮ್ ಮೈರ್ಪಾಡಿ ಮಂಡಿಸಿದರು.

ಸಂಘದ ಅಧ್ಯಕ್ಷರಾದ ಅರುಣ್ ಕೆ., ಕೋಶಾಧಿಕಾರಿ ಅಮಿತ್ ಎಚ್., ಉಪಾಧ್ಯಕ್ಷರಾದ ಪ್ರಶಾಂತ್ ಎಚ್. ಕ್ರೀಡಾ ಕಾರ್ಯದರ್ಶಿ ಸಾತ್ವಿಕ್ ಹೆಚ್ ಮತ್ತಿತರರು ಉಪಸ್ಥಿತರಿದ್ದರು.