ರಮಾನಾಥ ರೈ ವಿರುದ್ಧ ಅವಾಚ್ಯ ಪೋಸ್ಟ್ : ಬಂಟ್ವಾಳದಲ್ಲಿ ಪ್ರಕರಣ ದಾಖಲು

0
97

ಬಂಟ್ವಾಳ : ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಕಾರ್ಕಳದ ಸಾಣೂರು ಬಳಿ ಅಪಘಾತಕ್ಕೀಡಾದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಅವರು ನೀಡಿದ ದೂರಿನ ಮೇರೆಗೆ ಪ್ರಭಾಕರ ಹೆಗ್ಡೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಸೆ.20ರಂದು ಕಾರ್ಕಳದ ಸಾಣೂರು ಬಳಿ ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ರೈ ಸೇರಿದಂತೆ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿತ್ತು.

ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸಂದರ್ಭದಲ್ಲಿ, ಅದಕ್ಕೆ ಸಂಬಂಧಿಸಿದ ಫೇಸ್‌ಬುಕ್ ಪೋಸ್ಟ್‌ಗೆ ಪ್ರಭಾಕರ ಹೆಗ್ಡೆ ಅವರು ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿ ಹಾಗೂ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬೇಬಿ ಕುಂದರ್ ನೇತೃತ್ವದ ನಿಯೋಗವು ಬಂಟ್ವಾಳ ಉಪವಿಭಾಗದ ಎಎಸ್ಪಿಯವರಿಗೆ ದೂರು ಸಲ್ಲಿಸಿತ್ತು.

ನಿಯೋಗದಲ್ಲಿ ಪಕ್ಷದ ಮುಖಂಡರಾದ ಚಂದ್ರಪ್ರಕಾಶ್ ಶೆಟ್ಟಿ, ಬಾಲಕೃಷ್ಣ ಅಂಚನ್, ಅಬ್ಬಾಸ್ ಆಲಿ, ಸಂಪತ್ ಕುಮಾರ್ ಶೆಟ್ಟಿ, ಸುದೀಪ್ ಕುಮಾರ್ ರೈ ಮಾಣಿ ಹಾಗೂ ನಾರಾಯಣ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾಮಾಜಿಕ ಜಾಲತಾಣದ ಪೋಸ್ಟ್ ಹಾಗೂ ಅದರಲ್ಲಿರುವ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ಮುಂದಿನ ಕಾನೂನು ಕ್ರಮವು ತನಿಖೆಯ ಫಲಿತಾಂಶದ ಆಧಾರದ ಮೇಲೆ ನಡೆಯಲಿದೆ.