ಶಾಲಾ ಮಕ್ಕಳ ಸಂಚಾರಕ್ಕೂ ಅಡ್ಡಿ : ರಸ್ತೆಗೆ ಮರ ಬಿದ್ದು ಅವಾಂತರ

0
38

ಬಂಟ್ವಾಳ : ತಾಲೂಕಿನ ರಾಯಿ ಸಮೀಪ ಬಿಸಿರೋಡು–ಮೂಡುಬಿದಿರೆ ರಸ್ತೆಗೆ ಗೋಳಿ ಮರವೊಂದು ಅಡ್ಡವಾಗಿ ಬಿದ್ದ ಪರಿಣಾಮ ಶುಕ್ರವಾರ ಬೆಳಗ್ಗೆ ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಪ್ರಮುಖ ರಸ್ತೆಯಾಗಿರುವ ಇಲ್ಲಿ ಬೆಳಗ್ಗೆ ಮರ ಬಿದ್ದಿದ್ದರಿಂದ ಶಾಲಾ ಮಕ್ಕಳು, ಉದ್ಯೋಗಕ್ಕೆ ತೆರಳುವವರು ಸೇರಿದಂತೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು. ರಸ್ತೆ ಮಧ್ಯೆಯೇ ಮರ ಬಿದ್ದ ಪರಿಣಾಮ ವಾಹನಗಳ ಸಂಚಾರ ಸಾಧ್ಯವಾಗದೆ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.

ಮಾಹಿತಿ ತಿಳಿದು ರಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ರಾಯಿಬೆಟ್ಟು ಅವರ ನೇತೃತ್ವದಲ್ಲಿ ಸ್ಥಳೀಯರ ತಂಡ ಸ್ಥಳಕ್ಕೆ ಆಗಮಿಸಿ ಮರವನ್ನು ತೆರವುಗೊಳಿಸಿತು. ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಘಟನೆಯಿಂದ ಯಾವುದೇ ರೀತಿಯ ಅಪಾಯ ಅಥವಾ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.