ಗುರು ಶ್ರೇಷ್ಠರಿಗೆ ಗುರುವಾಯನಕೆರೆಯಲ್ಲಿ ಗೌರವದ ಅಭಿನಂದನೆಗಳು: ನಾಗರತ್ನ ಶಿರೂರು

0
6

ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ವತಿಯಿಂದ ಮೂಡುಬಿದಿರೆ ತಾಲೂಕಿನ 2026 – 27 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮೂಡುಬಿದಿರೆ ತಾಲೂಕಿನ ಗುರು ಶ್ರೇಷ್ಠರಿಗೆ ಗುರುವಾಯನಕೆರೆಯ ಎಕ್ಸೆಲ್ ಕಾಲೇಜಿನಲ್ಲಿ ನಡೆಯುವ ರಾಜ್ಯಮಟ್ಟದ ಸಮಾರಂಭದಲ್ಲಿ ಅಭಿನಂದಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಮೂಡುಬಿದಿರೆ ತಾಲೂಕು ಅಧ್ಯಕ್ಷರಾದ ನಾಗರತ್ನ ಶಿರೂರು ಅವರು ತಿಳಿಸಿರುತ್ತಾರೆ.

2026 – 27ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರೌಢಶಾಲಾ ವಿಭಾಗದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುವ ಮೂಡುಮಾರ್ನಾಡು ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಜಾನ್ ರೊನಾಲ್ಡ್ ಡಿಸೋಜ, ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಪುಚ್ಚ ಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಸುಕುಮಾರ ಕಾಡಿನ ಕೊಂಡ ಮತ್ತು ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪೆಂಚಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀವಾಣಿ ಅವರನ್ನು ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ವತಿಯಿಂದ ಅಭಿನಂದಿಸಲಾಗುತ್ತಿದೆ ಎಂದು ಅವರು ತಿಳಿಸಿರುತ್ತಾರೆ.

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ನಡೆಯುವ ಶಿಕ್ಷಕ ಸಮಾವೇಶದ ಈ ಸಮಾರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆ ನೌಕರರ ವಿವಿಧ ಹಂತದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಚಾರಗಳ ಬಗ್ಗೆ ಚರ್ಚಿಸಲಾಗುತ್ತದೆ. ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ವಿಭಾಗದ ಶಿಕ್ಷಕರು ಮತ್ತು ನೌಕರರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿರುತ್ತಾರೆ.