ಅಕ್ರಮವಾಗಿ ಮರಳು ದಾಸ್ತಾನು: ಪ್ರಕರಣ ದಾಖಲು

0
54

ಬಂಟ್ವಾಳ : ಪುಂಜಾಲಕಟ್ಟೆಯ ಕಾವಳಮೂಡೂರು ಗ್ರಾಮದ ಪಂಜಾಡಿ ಎಂಬಲ್ಲಿ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಮಾಡಿರುವ ಪ್ರಕರಣ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಜೇಶ್ ಕೆ.ವಿ. ಅವರು ಸಿಬ್ಬಂದಿಯೊಂದಿಗೆ ಇಲಾಖಾ ಜೀಪಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಪಂಜಾಡಿ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಬಗ್ಗೆ ಮಾಹಿತಿ ಲಭಿಸಿತ್ತು.

ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿದಾಗ ರಸ್ತೆ ಬದಿಯಲ್ಲಿ ಸುಮಾರು 50 ಗೋಣಿ ಚೀಲಗಳಲ್ಲಿ ಮರಳು ತುಂಬಿಸಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಈ ವೇಳೆ ಸ್ಥಳದಲ್ಲಿ 3–4 ಮಂದಿ ಮರಳನ್ನು ರಾಶಿ ಹಾಕುತ್ತಿದ್ದವರು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳದಲ್ಲಿ ಸುಮಾರು 20 ಬುಟ್ಟಿಯಷ್ಟು ಮರಳು, ಎರಡು ಅಲ್ಯೂಮಿನಿಯಂ ಬಕೆಟ್, ಎರಡು ಸಲಾಕೆ ಹಾಗೂ 2–3 ಖಾಲಿ ಗೋಣಿ ಚೀಲಗಳು ಪತ್ತೆಯಾಗಿವೆ. ದಾಸ್ತಾನು ಮಾಡಲಾಗಿದ್ದ ಮರಳಿನ ಅಂದಾಜು ಮೌಲ್ಯ ₹8,000, ಸಲಾಕೆಗಳ ಮೌಲ್ಯ ₹200 ಹಾಗೂ ಎರಡು ಅಲ್ಯೂಮಿನಿಯಂ ಬಕೆಟ್‌ಗಳ ಮೌಲ್ಯ ₹100 ಎಂದು ಅಂದಾಜಿಸಲಾಗಿದೆ.

ಪೊಲೀಸರು ಮರಳು ಹಾಗೂ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಪರಾರಿಯಾಗಿರುವ ವ್ಯಕ್ತಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.