ಕನ್ನಡ ಶಾಲೆಗಳನ್ನು ಉಳಿಸಿ-ಬೆಳೆಸಿ ಅಭಿಯಾನ ಅಂಗವಾಗಿ ಕನ್ನಡ ಭವನದಲ್ಲಿ ಗಡಿನಾಡ ಕನ್ನಡಿಗರ ಸ್ನೇಹ ಸಂಗಮ ಕಾರ್ಯಕ್ರಮ

0
32

ಕನ್ನಡ ಶಾಲೆಗಳನ್ನು ಉಳಿಸಿದರೆ ಮಾತ್ರ ಭಾಷೆ, ಸಂಸ್ಕೃತಿ ಉಳಿಕೆ ಸಾಧ್ಯ: ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ

ಕಾಸರಗೋಡು : ಕನ್ನಡ ಶಾಲೆಗಳನ್ನು ಉಳಿಸಿದರೆ ಮಾತ್ರ ಭಾಷೆ, ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಹಿರಿಯ ಧಾರ್ಮಿಕ ಮುಂದಾಳು ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅಭಿಪ್ರಾಯಪಟ್ಟರು.

ನಗರದ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದಲ್ಲಿ ನಡೆದ ಕನ್ನಡ ಶಾಲೆಗಳನ್ನು ಉಳಿಸಿ-ಬೆಳೆಸಿ ಅಭಿಯಾನ ಅಂಗವಾಗಿ ಕನ್ನಡ ಭವನದಲ್ಲಿ ಗಡಿನಾಡ ಕನ್ನಡಿಗರ ಸ್ನೇಹ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಯಿ ನೀಡುವ ತುತ್ತಿನೊಂದಿಗೆ ಕನ್ನಡ ಭಾಷೆ ನಮ್ಮನ್ನು ಸೇರಿಕೊಳ್ಳುತ್ತದೆ. ಅದು ಬದುಕಿನುದ್ದಕ್ಕೂ ನಮ್ಮ ಜತೆಗಿದ್ದು ಸಂಸ್ಕಾರ ಒದಗಿಸುತ್ತದೆ ಎಂದವರು ವಿವರಿಸಿದರು.
ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಅವರು ಹಾರಾರ್ಪಣೆ ನಡೆಸಿದರು. ಕನ್ನಡ ಧ್ವಜವನ್ನು ಹಿಡಿದು ಕನ್ನಡ ಪರ ಪ್ರತಿಜ್ಞೆ ಕೈಗೊಳ್ಳಲಾಯಿತು. ಅಭಿಯಾನದ ರೂವಾರಿ ಉನೈಸ್ ಪೆರಾಜೆ ಅವರಿಗೆ ಕನ್ನಡ ಭವನ ವತಿಯಿಂದ “ಕನ್ನಡ ಪಯಸ್ವಿನಿ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಕನ್ನಡ ಭವನ ಸಂಸ್ಥಾಪಕ ಡಾ.ವಾಮನರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ಗೌರವಾರ್ಪಣೆ ನಡೆಸಿದರು. ವಿವಿಧ ವಲಯಗಳ ಸಾಧಕರಾದ ಶಿಹಾಬ್ ಗಾಳಿಮುಖ, ಈಶ್ವರ ನಾಯ್ಕ್ ಮಾಸ್ಟರ್, ವಸಂತ ಬಾರಡ್ಕ, ವಸಂತ ಕೆರೆಮನೆ, ಎಂ.ಕೆ.ಎಚ್.ಪೆರುವಾಡ್ ಮೊದಲಾದವರು ಉಪಸ್ಥಿತರಿದ್ದರು.

ಡಾ.ವಾಮನರಾವ್ ಬೇಕಲ್ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಪತ್ರಕತ್ರ ವೀಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಅಖಿಲೇಶ್ ನಗುಮುಗಂ ವಂದಿಸಿದರು.