
ಮಂಗಳೂರು: ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ 2026ನೇ ಸಾಲಿನ ಹಿಂದಿ ದಿನಾಚರಣೆಯನ್ನು ಸೆಪ್ಟೆಂಬರ್ 24ರಂದು ಕಾಲೇಜಿನ ಉಪನ್ಯಾಸ ಕೊಠಡಿಯಲ್ಲಿ ಆಚರಿಸಲಾಯಿತು. ಹಿಂದಿ ಭಾಷೆಯ ಉಗಮ, ಬೆಳವಣಿಗೆ, ಮಹತ್ವ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿನ ಅದರ ಪ್ರಸ್ತುತತೆಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.
ಸಂಸ್ಥೆಯ ಗೀತೆಯೊಂದಿಗೆ ಕಾರ್ಯಕ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರಿನ ಎಸ್.ಡಿ.ಎಂ. ವಾಣಿಜ್ಯ ನಿರ್ವಹಣಾ ಕಾಲೇಜಿನ ಹಿಂದಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಜ್ಯೋತಿ ಅವರು ವಿಶೇಷ ಉಪನ್ಯಾಸ ನೀಡಿದರು. ಹಿಂದಿ ಭಾಷೆಯ ಉಗಮ ಮತ್ತು ಬೆಳವಣಿಗೆಯನ್ನು ವಿವರಿಸಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಹಿಂದಿ ಭಾಷೆಯ ಮಹತ್ವವನ್ನು ತಿಳಿಸಿದರು.
ಸಂವಹನ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜದಲ್ಲಿ ಹಿಂದಿ ಭಾಷೆಯ ಪ್ರಸ್ತುತತೆಯನ್ನು ವಿವರಿಸುವ ಮೂಲಕ ವಿದ್ಯಾರ್ಥಿಗಳಿಗೆ ಹಿಂದಿಯ ಐತಿಹಾಸಿಕ ಬೆಳವಣಿಗೆ ಹಾಗೂ ಸಮಕಾಲೀನ ಮಹತ್ವದ ಕುರಿತು ಉತ್ತಮ ಅರಿವು ಮೂಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾಣ್ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಹಿಂದಿ ಭಾಷೆಯ ಮಹತ್ವವನ್ನು ವಿವರಿಸಿದ ಅವರು, ಭಾಷೆಯ ಬಗ್ಗೆ ಪ್ರೀತಿ ಹಾಗೂ ಗೌರವ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿವಿಧ ಸಂಸ್ಕೃತಿಗಳ ನಡುವೆ ಭಾಷೆಯು ಸೇತುವೆಯಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ, ಸಾಂಸ್ಕೃತಿಕ ಮೌಲ್ಯಗಳು, ಪರಂಪರೆ ಮತ್ತು ಸಾಮಾಜಿಕ ಅರಿವನ್ನು ಉಳಿಸುವಲ್ಲಿ ಭಾಷೆಯ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಬಳಿಕ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದಿ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಹಿಂದಿ ಭಾಷೆಯ ಸಂರಕ್ಷಣೆ, ಬೆಳವಣಿಗೆ ಹಾಗೂ ಬಳಕೆಯ ಅಗತ್ಯವನ್ನು ತಿಳಿಸಿದ ಅವರು, ಭಾಷೆಯು ಸಾಂಸ್ಕೃತಿಕ ಅರಿವು ಮತ್ತು ಪರಸ್ಪರ ಸಂವಹನವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಭಾಷಾ ವೈವಿಧ್ಯತೆಯನ್ನು ಗೌರವಿಸುವಂತೆ ಪ್ರೋತ್ಸಾಹಿಸಿದರು. ಕಾರ್ಯಕ್ರಮದಲ್ಲಿ ಹಿಂದಿ ಉಪನ್ಯಾಸಕ ಪ್ರೊ ದೀಕ್ಷಿತ್ ಉಪಸ್ಥಿತರಿದ್ದರು. ಬೇರೆ ವಿಭಾಗದ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ದ್ವಿತೀಯ ಬಿ ಬಿ ಎ ವಿದ್ಯಾರ್ಥಿನಿ ಕುಮಾರಿ ಶಮಾ ಕಾರ್ಯಕ್ರಮ ನಿರೂಪಿಸಿದರು, ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಕುಮಾರಿ ಬಿಂದು ಸ್ವಾಗತಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಕುಮಾರಿ ನೌಶಿದಾ ವಂದನಾರ್ಪಣೆ ಸಲ್ಲಿಸಿದರು.
ವಿವಿಧ ವಿಭಾಗಗಳ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಾರ್ಯಕ್ರಮದ ಮಹತ್ವವನ್ನು ಹೆಚ್ಚಿಸಿತು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಗೊಂಡಿತು.
