ಮೂಡಬಿದಿರೆಯಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ

0
34

ಮೂಡಬಿದಿರೆ : ಯುವವಾಹಿನಿ (ರಿ.) ಮೂಡಬಿದಿರೆ ಘಟಕ ಹಾಗೂ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರ, ಮೂಡಬಿದಿರೆ ಇವರ ಸಹಯೋಗದಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಮೂಡಬಿದಿರೆಯ ಬಿಲ್ಲವ ಸಂಘದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮೂಡಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ವಹಿಸಿದ್ದರು. ಕಾರ್ಯಕ್ರಮವನ್ನು ಭಾರತೀಯ ರಿಸರ್ವ್ ಬ್ಯಾಂಕ್, ಬೆಂಗಳೂರು, ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗದ ಸಹಾಯಕ ಮಹಾ ಪ್ರಬಂಧಕರಾದ ಅರುಣ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಗೀತಾ ಯಶೋಧರ್, ನಬಾರ್ಡ್ ಡಿಡಿಎಂ ಸಂಗೀತಾ ಎಸ್. ಕರ್ತಾ ಹಾಗೂ ರುಡ್‌ಸೆಟ್ ಉಜಿರೆಯ ನಿರ್ದೇಶಕ ಸುನೀಲ್ ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುವವಾಹಿನಿ ಮೂಡಬಿದಿರೆ ಘಟಕದ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ವಿಭಾಗದ ನಿರ್ದೇಶಕಿ ವೀಚೀಸ್ ತರಬೇತಿ ಕೇಂದ್ರದ ಮಾಲಕಿ ಶುಭಲಕ್ಷ್ಮಿ ಹಾಗೂ ಬಿಲ್ಲವ ಸಂಘದ ಅಧ್ಯಕ್ಷ ನವೀನ್ ಚಂದ್ರ ಕರ್ಕೇರ ಉಪಸ್ಥಿತರಿದ್ದರು.

ರುಡ್‌ಸೆಟ್ ನಿರ್ದೇಶಕ ಸುನೀಲ್ ನಾಯ್ಕ್ ಅವರು ಸಂಸ್ಥೆಯಲ್ಲಿ ನಡೆಯುವ ವಿವಿಧ ಉಚಿತ ಸ್ವಯಂ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿಗಳ ಕುರಿತು ಮಾಹಿತಿ ನೀಡಿ, ಯುವಜನರು ತರಬೇತಿಯನ್ನು ಪಡೆದು ಸ್ವಯಂ ಉದ್ಯೋಗ ಕೈಗೊಳ್ಳುವಂತೆ ಕರೆ ನೀಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಗೀತಾ ಯಶೋಧರ್ ಅವರು ಉಚಿತ ಕೌಶಲ್ಯ ತರಬೇತಿಯ ಸದುಪಯೋಗ ಪಡೆದುಕೊಂಡು ಕೌಶಲ್ಯವನ್ನು ಅಭಿವೃದ್ಧಿಪಡಿಸಿ ಸ್ವಂತ ಉದ್ಯಮ ಆರಂಭಿಸುವಂತೆ ಸಲಹೆ ನೀಡಿದರು. ಅರ್ಹ ಫಲಾನುಭವಿಗಳು ತಮ್ಮ ಉದ್ಯಮದ ಬಂಡವಾಳಕ್ಕಾಗಿ ಸರ್ಕಾರದ ವಿವಿಧ ಯೋಜನೆಗಳಡಿ ಬ್ಯಾಂಕ್ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ನಬಾರ್ಡ್ ಡಿಡಿಎಂ ಸಂಗೀತಾ ಎಸ್. ಕರ್ತಾ ಅವರು ಸ್ವಸಹಾಯ ಸಂಘಗಳ ಸಾಲ ಸೌಲಭ್ಯಗಳು ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಆರ್‌ಬಿಐ ಸಹಾಯಕ ಮಹಾ ಪ್ರಬಂಧಕ ಅರುಣ್ ಕುಮಾರ್ ಅವರು ಭಾರತೀಯ ರಿಸರ್ವ್ ಬ್ಯಾಂಕಿನ ಕಾರ್ಯಗಳು, ಬ್ಯಾಂಕ್ ಗ್ರಾಹಕರ ರಕ್ಷಣೆ ಹಾಗೂ RBI Integrated Ombudsman Scheme ಕುರಿತು ಅರಿವು ಮೂಡಿಸಿದರು. ಅಲ್ಲದೆ, ಅನ್ವಯವಾಗುವ ನಿಯಮಗಳ ಪ್ರಕಾರ ಪ್ರತಿ ಠೇವಣಿದಾರರಿಗೆ ಪ್ರತಿ ಬ್ಯಾಂಕ್‌ಗೆ ಗರಿಷ್ಠ ₹5 ಲಕ್ಷದವರೆಗೆ ಇರುವ ಠೇವಣಿ ವಿಮಾ ರಕ್ಷಣೆಯ ಕುರಿತು ಮಾಹಿತಿ ನೀಡಿದರು. ನಿಯಂತ್ರಿತ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ಉಳಿತಾಯ ಮತ್ತು ಸಾಲ ವ್ಯವಹಾರಗಳನ್ನು ನಡೆಸುವಂತೆ ಅವರು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆರ್ಥಿಕ ಸಾಕ್ಷರತಾ ಕೇಂದ್ರ (AFLC) ಅಮೂಲ್ಯ, ಮಂಗಳೂರಿನ ಸಮಾಲೋಚಕರಾದ ಲತೇಶ್ ಬಿ. ಅವರು ಹಣಕಾಸು ಸಾಕ್ಷರತೆ, ಉಳಿತಾಯ, ಡಿಜಿಟಲ್ ಬ್ಯಾಂಕಿಂಗ್, ಸುರಕ್ಷಿತ ಡಿಜಿಟಲ್ ವ್ಯವಹಾರಗಳು ಹಾಗೂ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆಸಕ್ತ ಫಲಾನುಭವಿಗಳಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ನೋಂದಣಿಗೆ ಸಹಾಯ ಮಾಡಲಾಯಿತು.

ಅಧ್ಯಕ್ಷ ಗಿರೀಶ್ ಕೋಟ್ಯಾನ್ ಅವರು ಸರ್ಕಾರದ ವಿವಿಧ ಯೋಜನೆಗಳು, ಬ್ಯಾಂಕಿಂಗ್ ಸೌಲಭ್ಯಗಳು, ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಹಣಕಾಸು ಸಾಕ್ಷರತಾ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ಜೀವನಮಟ್ಟವನ್ನು ಸುಧಾರಿಸಿಕೊಳ್ಳುವಂತೆ ಕರೆ ನೀಡಿದರು. ಮುಂದಿನ ದಿನಗಳಲ್ಲಿ ಸಮಾಜದ ಹೆಚ್ಚಿನ ಸದಸ್ಯರಿಗೆ ಅನುಕೂಲವಾಗುವಂತೆ ಇಂತಹ ಹಣಕಾಸು ಸಾಕ್ಷರತಾ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ವೇತ ಜೈನ್, ಮೂಡಬಿದಿರೆ ಅವರು ನಿರ್ವಹಿಸಿದರು.