
ಉಜಿರೆ : ಹೊಸದಾಗಿ ಬೆಳೆದ ಭತ್ತದ ಕದಿರುಗಳನ್ನು (ತೆನೆ) ಗದ್ದೆಯಿಂದ ತಂದು ದೇವರಿಗೆ ಮತ್ತು ಪ್ರಕೃತಿಗೆ ಅರ್ಪಿಸುವ ಮೂಲಕ ಭೂ ತಾಯಿಗೆ ಕೃತಜ್ಞತೆ ಅರ್ಪಿಸುವುದೇ ತೆನೆ ಹಬ್ಬದ ಉದ್ದೇಶವಾಗಿದೆ.
ಹೊಸ ತೆನೆಯನ್ನು ಧಾನ್ಯಲಕ್ಷ್ಮೀ ಎಂದು ಗೌರವಿಸಲಾಗುತ್ತದೆ. ತೆನೆಗಳನ್ನು ಪವಿತ್ರ ಜಲದಿಂದ ತೊಳೆದು ಬಸದಿಯಲ್ಲಿ ದೇವರ ಸನ್ನಿಧಿಯಲ್ಲಿಟ್ಟು ವಿಶೇಷ ಪೂಜೆ ಮಾಡಲಾಗುತ್ತದೆ. ಬಳಿಕ ಇದನ್ನು ಶ್ರಾವಕರಿಗೆ ವಿತರಿಸಿ, ಸುಖ-ಶಾಂತಿ, ಸಮೃದ್ಧಿಯ ಸಂಕೇತವಾಗಿ ಪ್ರತಿ ಮನೆಯಲ್ಲಿ ಮುಖ್ಯದ್ವಾರ ಮತ್ತು ಕಂಬಗಳಿಗೆ ಕಟ್ಟಲಾಗುತ್ತದೆ.

ಬೆಳ್ತಂಗಡಿ ಬಸದಿಯಲ್ಲಿ ಶುಕ್ರವಾರ ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜಬಳ್ಳಾಲ್ ನೇತೃತ್ವದಲ್ಲಿ ಪ್ರಧಾನ ಅರ್ಚಕ ಕೆ. ಜಯರಾಜ ಇಂದ್ರರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ ತೆನೆಯನ್ನು ಪ್ರಸಾದ ರೂಪದಲ್ಲಿ ಎಲ್ಲರಿಗೂ ವಿತರಿಸಲಾಯಿತು.
