ನವದೆಹಲಿ : ಏಷ್ಯನ್ ಗೇಮ್ಸ್ 2026ರ ಮಹಿಳಾ ಕಬಡ್ಡಿ ವಿಭಾಗದಲ್ಲಿ ಭಾರತ ಮತ್ತೊಮ್ಮೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಇರಾನ್ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಭಾರತ 37-34 ಅಂಕಗಳ ಅಂತರದಿಂದ ಗೆಲುವು ಸಾಧಿಸಿ ಚಿನ್ನದ ಪದಕವನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಆರಂಭದಿಂದಲೇ ಉತ್ತಮ ಆಟ ಪ್ರದರ್ಶಿಸಿದ ಭಾರತೀಯ ಆಟಗಾರ್ತಿಯರು ಮೊದಲಾರ್ಧದ ಅಂತ್ಯಕ್ಕೆ 22-16 ಅಂಕಗಳ ಮುನ್ನಡೆ ಸಾಧಿಸಿದ್ದರು. ದ್ವಿತೀಯಾರ್ಧದಲ್ಲಿ ಇರಾನ್ ತಂಡ ತೀವ್ರ ಪೈಪೋಟಿ ನೀಡುವುದರೊಂದಿಗೆ ಭಾರತದ ಮುನ್ನಡೆಯನ್ನು ಕಡಿಮೆ ಮಾಡಿತು.
ಪಂದ್ಯದ ಅಂತಿಮ ಹಂತದಲ್ಲಿ ಇರಾನ್ ತಂಡ ಒತ್ತಡ ಹೆಚ್ಚಿಸಿದರೂ, ಭಾರತೀಯ ಆಟಗಾರ್ತಿಯರು ರಕ್ಷಣೆಯಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿ ಎದುರಾಳಿಯ ಅಂಕ ಗಳಿಕೆಗೆ ಕಡಿವಾಣ ಹಾಕಿದರು. ಅಂತಿಮವಾಗಿ ಭಾರತ 37-34 ಅಂಕಗಳಿಂದ ಗೆದ್ದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್‌ನ ಮಹಿಳಾ ಕಬಡ್ಡಿಯಲ್ಲಿ ಭಾರತ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ನಾಲ್ಕು ಆವೃತ್ತಿಗಳಲ್ಲಿ ಭಾರತ ಮೂರು ಬಾರಿ ಚಿನ್ನದ ಪದಕ ಗೆದ್ದಿದೆ. 2018ರ ಆವೃತ್ತಿಯಲ್ಲಿ ಮಾತ್ರ ಇರಾನ್ ವಿರುದ್ಧ ಸೋಲು ಕಂಡು ಚಿನ್ನದ ಪದಕದಿಂದ ವಂಚಿತವಾಗಿತ್ತು.
ಇರಾನ್ ವಿರುದ್ಧದ ಫೈನಲ್‌ನಲ್ಲಿ ಕೊನೆಯ ಕ್ಷಣದವರೆಗೂ ಹೋರಾಟ ನಡೆಸಿದ ಭಾರತೀಯ ಆಟಗಾರ್ತಿಯರು ನಿರ್ಣಾಯಕ ಸಂದರ್ಭದಲ್ಲಿ ತೋರಿದ ರಕ್ಷಣಾತ್ಮಕ ಆಟವೇ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

