ಮೀಯಪದವು ವಿದ್ಯಾವರ್ಧಕ ಶಾಲೆಯಲ್ಲಿ ದಿ | ಯಂ. ರಾಮಕೃಷ್ಣರಾವ್ ಸಂಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮ

0
15

ಮಂಜೇಶ್ವರ : ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಸಂಚಾಲಕರಾಗಿ ಹಾಗೂ ಅಧ್ಯಾಪಕರಾಗಿ ಮೀಂಜ ಪ್ರದೇಶದ ಶೈಕ್ಷಣಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ದಿ. ಯಂ. ರಾಮಕೃಷ್ಣರಾವ್ ಅವರ 21ನೇ ಪುಣ್ಯತಿಥಿಯ ಅಂಗವಾಗಿ ಸೆ. 26ರಂದು ಸಂಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ರಂಗಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ನಾರಾಯಣ ದೇಲಂಪಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಲಾ ಆಡಳಿತ ಸಲಹೆಗಾರ ಶ್ರೀಧರ ರಾವ್ ಆರ್.ಎಂ. ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಸೋದೆ ಸಮೂಹ ಶಿಕ್ಷಣ ಸಂಸ್ಥೆ, ಉಡುಪಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ. ಡಾ. ರಾಧಾಕೃಷ್ಣ ಎಸ್. ಐತಾಳ ಹಾಗೂ ಎಸ್.ವಿ.ವಿ.ಎಚ್.ಎಸ್.ಎಸ್. ಮೀಯಪದವು ಸಂಸ್ಥೆಯ ಸಂಚಾಲಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳಾದ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ನಿರ್ದೇಶಕ ಎಂ.ಜಿ. ಬಾಲಸುಬ್ರಹ್ಮಣ್ಯ ಹಾಗೂ ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಅಂಗ್ಲಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಗದೀಶ್ ಶೆಟ್ಟಿ ಎಲಿಯಾಣ ಅವರನ್ನು ಸನ್ಮಾನಿಸಲಾಗುವುದು.

ಮಧ್ಯಾಹ್ನ 2 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ಗಾನ ಲಹರಿ–99’ ಕಾರ್ಯಕ್ರಮ ನಡೆಯಲಿದೆ. ಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಶಾಲಾ ಸಂಚಾಲಕಿ ರಾಜೇಶ್ವರಿ ಎಸ್. ರಾವ್, ಪ್ರಧಾನ ಅಧ್ಯಾಪಕ ಡಿ.ಎಸ್. ಅರವಿಂದಾಕ್ಷ ಭಂಡಾರಿ, ರಕ್ಷಕ-ಶಿಕ್ಷಕ ಸಂಘ, ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ, ಹಳೆ ವಿದ್ಯಾರ್ಥಿ ಸಂಘ, ಶಾಲಾ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.