
ಮಂಗಳೂರು : ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸಂಘದ ಸಹಯೋಗದೊಂದಿಗೆ ಮೂಡುಬಿದಿರೆ ಮಹಾವೀರ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ ಒಂದು ದಿನದ ಹಣಕಾಸಿನ ಅಂತರ್ವೇಶ, ಕೌಶಲ್ಯಗಳು, ಉದ್ಯಮಶೀಲತೆ, ಸುಸ್ಥಿರ ಆರ್ಥಿಕ ಅಭಿವೃದ್ಧಿ ಬೆಳವಣಿಗೆಗಳ ರಾಷ್ಟ್ರೀಯ ಸಮಾವೇಶವನ್ನು ಮಣಿಪಾಲ ಎ.ಜಿ.ಇ.ಯ ಕಾರ್ಯದರ್ಶಿ ಹಾಗೂ ಮಾಹೆ ಸಲಹೆಗಾರ ಡಾ ನಾರಾಯಣ ಸಭಾಹಿತ ದೀಪ ಬೆಳಗಿ ಉದ್ಘಾಟಿಸಿದರು.
ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ 1942 ರಲ್ಲಿ ಮಣಿಪಾಲದಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅನ್ನು ಟಿಎಂಎ ಪೈ ಅವರು ಪ್ರಾರಂಭಿಸುವಾಗ ಅವರ ಮನಸ್ಸಿನಲ್ಲಿ ಇದ್ದುದು ಶೈಕ್ಷಣಿಕವಾಗಿ ಅನುತ್ತೀರ್ಣರಾದವರನ್ನು ಕೌಶಲ್ಯಯುಕ್ತವಾಗಿ ಉತ್ತಮ ಬದುಕಿಗೆ ಪ್ರೇರೇಪಿಸುವುದೇ ಆಗಿತ್ತು. ಆದರೆ ಕಾಲಾ ನಂತರದ ಬದಲಾವಣೆಯಲ್ಲಿ ಮಣಿಪಾಲ, ಕಾರ್ಕಳ, ಕುಂದಾಪುರ, ಮೂಡುಬಿದಿರೆ ಇತ್ಯಾದಿ ಹೆಚ್ಚಿನ ಪ್ರದೇಶಗಳ ಶೈಕ್ಷಣಿಕ ಅಗತ್ಯತೆಗಳನ್ನು ಕಂಡುಕೊಂಡು ಅಲ್ಲೆಲ್ಲ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿಕ್ಷಣ ಸಂಸ್ಥೆಗಳಿಗೆ ಉತ್ತೇಜನವನ್ನು ನೀಡಿದರು. ಮಾತ್ರವಲ್ಲ ಹಿಂದಿನ ದಕ್ಷಿಣ ಕನ್ನಡದಲ್ಲಿ ಮೂರು ಬ್ಯಾಂಕುಗಳು ಪ್ರಾರಂಭವಾಗಲು ಉತ್ತೇಜನವನ್ನು ಕೊಟ್ಟರು. ಆದರೆ ಈ ಎಲ್ಲ ಸಂದರ್ಭಗಳಲ್ಲಿ ಪ್ರಕೃತಿಯನ್ನು ಪರಿಸರವನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಅವರು ಮಾಡಿದರು.

ಇದು ಇಂದಿನ ಅತ್ಯಂತ ಅಗತ್ಯದ ಸಂಗತಿಯಾಗಿದೆ. ವಿದ್ಯಾರ್ಥಿಗಳು ಪ್ರತಿಯೊಬ್ಬರು ವರುಷಕ್ಕೆ ಒಂದಾದರೂ ಗಿಡವನ್ನು ಬೆಳೆಸಿ, ಮರವನ್ನು ಉಳಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಏಕೆಂದರೆ ಒಂದು ಲ್ಯಾಪ್ಟಾಪ್ ರಚನೆಗಾಗಿ ಒಂದು ಲಕ್ಷ ತೊಂಬತ್ತೈದು ಸಾವಿರ ಲೀಟರ್ಗಳಷ್ಟು ಉತ್ತಮ ನೀರನ್ನು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಉಪಯೋಗಿಸಬೇಕಾಗುತ್ತದೆ. ಭಾರತವು ಪ್ರತಿ ವರ್ಷ 300 ಮಿಲಿಯನ್ ಲ್ಯಾಪ್ಟಾಪ್ ಗಳನ್ನು ನಿರ್ಮಿಸುತ್ತಿದೆ ಎಂದರೆ ನಾವು ಎಷ್ಟು ಉತ್ತಮ ನೀರು ಮತ್ತು ನಿಸರ್ಗವನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ ಆಲೋಚಿಸಬೇಕು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಮಾಹೆ ಸಂಸ್ಥೆಯು ಶೂನ್ಯ ಇಂಗಾಲದ ಡೈಯಾಕ್ಸೈಡ್ ಗಾಗಿ ಪ್ರಯತ್ನಿಸುತ್ತಿದೆ ಎಂಬುದನ್ನು ನೆನಪಿಸಿದರು.
ಬ್ಯಾಂಕ್ ಆಫ್ ಬರೋಡದ ಚೀಫ್ ಜನರಲ್ ಮ್ಯಾನೇಜರ್ ಎಂ ರವೀಂದ್ರ ರೈ ಅವರು ಮಾತನಾಡಿ ರಸ್ತೆ ಬದಿಯಲ್ಲಿರುವ ಕಬ್ಬಿನ ಜ್ಯೂಸ್ ಮಾರುವಾತ ಕೂಡ ಅತ್ಯಂತ ನಿಖರವಾದ ಹಣಕಾಸಿನ ವ್ಯವಸ್ಥೆಯ ಕ್ಯೂಆರ್ ಕೋಡ್ ಅಥವಾ ಯುಪಿಐ ಬಳಸಿ ರಾಷ್ಟ್ರ ಸೇವೆಗೆ ಸಮರ್ಪಿಸಿಕೊಂಡಿರುವದ್ದನ್ನು ವಿದೇಶಿಯರು ಕೂಡ ಬಹಳವಾಗಿ ಮೆಚ್ಚಿಕೊಂಡಿರುತ್ತಾರೆ ಎಂದು ರಾಷ್ಟ್ರದ ಹೆಮ್ಮೆಯ ಸಂಗತಿಯನ್ನು ಹಾಡಿ ಹೊಗಳಿದರು.

ಆರ್ ಬಿ ಐ ನ ಸಹಾಯಕ ಜನರಲ್ ಮ್ಯಾನೇಜರ್ ಸ್ವಪ್ನಿಲ್ ಶಾನು ಭಾರ್ಗವ್ ಮಾತನಾಡಿ ಮಹಿಳೆಯರನ್ನು ಕೂಡ ಸ್ಟಾರ್ಟ್ ಅಪ್ ಕಡೆಗೆ ಸೆಳೆಯುವ ಅಗತ್ಯವಿದೆ. ಅದರಿಂದ ದೇಶಿಯ ಉತ್ಪಾದನೆಗೆ ಹೆಚ್ಚು ಬಲ ಬರಲು ಸಾಧ್ಯವಾಗುತ್ತದೆ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ, ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಅರ್ಥಶಾಸ್ತ್ರ ವಿಭಾಗದ ಗೀತಾ ಕುಮಾರಿ, ಸಂಘದ ಕಾರ್ಯದರ್ಶಿ ಅಜಿಲ್ ಮೇಲ್ವಿನ್ ಕ್ಯಾಸ್ಟಲಿನೊ ಹಾಜರಿದ್ದರು. ಕಾಲೇಜಿನ ಪ್ರಾಚಾರ್ಯ ಡಾ. ರಾಧಾಕೃಷ್ಣ ಸ್ವಾಗತಿಸಿದರು. ಡಾ ಮಹೇಶ್ ಕುಮಾರ್ ಶೆಟ್ಟಿ, ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಗೌರಿ ಕೆ, ಡಾ.ಮಂಜುಳಾ ಮಲ್ಯ, ಡಾ. ಸತೀಶ್ ಕೆ ಕಾರ್ಯಕ್ರಮ ಸಂಘಟಿಸಿದ್ದರು. ಸಂಘದ ಅಧ್ಯಕ್ಷೆ ಶ್ರೀಲತಾ ಕಾಮಿಲಾ ವಂದಿಸಿದರು.
ವರದಿ ರಾಯಿ ರಾಜ ಕುಮಾರ್
.
