ಕಾರ್ಕಳ : ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ ಘಟನೆ ಇರ್ವತ್ತೂರಿನ ಕೆಂಪುಗುಡ್ಡೆ ಎಂಬಲ್ಲಿ ನಡೆದಿದೆ.
ಬಂಧಿತರನ್ನು ಮಿಯ್ಯಾರು ಗ್ರಾಮದ ಸುನಿಲ್ ಡಿಸೋಜ (39), ಹರೀಶ್ ಭಂಡಾರಿ (54), ರೆಂಜಾಳ ಗ್ರಾಮದ ಶ್ರೀನಿವಾಸ (38), ಮಂಗಳೂರು ಮಾರ್ಪಾಡಿ ಗ್ರಾಮದ ರಾಜೇಶ್ (31) ಹಾಗೂ ಇರ್ವತ್ತೂರಿನ ಅರುಣ್ ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಸ್ಥಳದಲ್ಲಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯ ವೇಳೆ ಒಂದು ಹುಂಜ, ₹1,600 ನಗದು ಹಾಗೂ ಎರಡು ಬಾಳು ಕತ್ತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

