ಯುವಜನರಲ್ಲೂ ಹೃದಯಾಘಾತ ಹೆಚ್ಚುತ್ತಿರುವುದು ಆತಂಕಕಾರಿ: ಡಾ. ಜಿ.ಎಸ್. ಚಂದ್ರಶೇಖರ್

ಉಡುಪಿ: ಮನುಷ್ಯನ ಜೀವನದಲ್ಲಿ ಸಾಧನೆ ಮಾಡಲು ಉತ್ತಮ ಆರೋಗ್ಯವೇ ಅಡಿಪಾಯ. ದೇಶದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ವಿಶ್ವ ಹೃದಯ ದಿನದ ಅಂಗವಾಗಿ ಆದರ್ಶ ಆಸ್ಪತ್ರೆ ಉಡುಪಿಯಲ್ಲಿ ಸೆ.27ರಂದು ಆಯೋಜಿಸಿದ್ದ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಡುಪಿ ಜಿಲ್ಲೆ ಹಲವು ಸಾಧನೆಗಳಿಗೆ ಹೆಸರಾಗಿದ್ದು, ವೈದ್ಯಕೀಯ ಸೇವೆಯ ಜತೆಗೆ ಆದರ್ಶ ಆಸ್ಪತ್ರೆಯು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಯಾವುದೇ ರೋಗಗಳ ತಡೆಗೆ ಆರೋಗ್ಯ ಜಾಗೃತಿ ಅತ್ಯಂತ ಅಗತ್ಯ ಎಂದರು.

ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಯುವಜನತೆಯಲ್ಲೂ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಅಸಮರ್ಪಕ ಆಹಾರ ಪದ್ಧತಿ, ದೈಹಿಕ ಶ್ರಮದ ಕೊರತೆ ಹಾಗೂ ಮಾನಸಿಕ ಒತ್ತಡ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ತಿಳಿಸಿದರು.
ಹೃದ್ರೋಗ ತಜ್ಞ ಡಾ. ಸುಹಾಸ್ ಜಿ.ಸಿ. ಮಾತನಾಡಿ, ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಅಗತ್ಯ ನಿದ್ರೆ ಮತ್ತು ವಿಶ್ರಾಂತಿ ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತವೆ. ಸಾರ್ವಜನಿಕರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಶಿಬಿರದಲ್ಲಿ ಹೃದ್ರೋಗ ತಜ್ಞರಾದ ಡಾ. ಶ್ರೀಕಾಂತ ಕೃಷ್ಣ, ಡಾ. ಸುಹಾಸ್ ಜಿ.ಸಿ., ಡಾ. ವಿಶು ಕುಮಾರ್ ಬಿ. ಹಾಗೂ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕುಲರ್ ಸರ್ಜನ್ ಡಾ. ಗುರುಪ್ರಸಾದ್ ಡಿ. ರೈ ಅವರು ತಪಾಸಣೆ ನಡೆಸಿ ಆರೋಗ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು. ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.

ಉಚಿತ ಹೃದಯ ತಪಾಸಣೆ
ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಸಾರ್ವಜನಿಕರಿಗೆ ರಕ್ತದ ಸಕ್ಕರೆ, ಇಸಿಜಿ, ಇಕೋ, ಟಿಎಂಟಿ ಹಾಗೂ ಲಿಪಿಡ್ ಪ್ರೊಫೈಲ್ ಸೇರಿದಂತೆ ವಿವಿಧ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು. ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಇದೇ ವೇಳೆ ಸೆ.28ರಿಂದ ಅ.4ರವರೆಗೆ ಆದರ್ಶ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿತ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಒದಗಿಸಲಾಗುವುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
