ಮಂತ್ರಾಲಯ / ಹಂಪಿ : ಕರ್ನಾಟಕ ಸರ್ಕಾರವು ತುಳು ಭಾಷೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ತುಳುನಾಡ ರಕ್ಷಣಾ ವೇದಿಕೆ (ರಿ) ಉಡುಪಿ ಜಿಲ್ಲೆ, ಕಾಪು ತಾಲೂಕು ಹಾಗೂ ಬೈರಂಪಳ್ಳಿ ಘಟಕದ ವತಿಯಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು ತುಳುವಿಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿ ವಾರ್ಷಿಕ 82 ಲಕ್ಷ ರೂ. ಅನುದಾನ ಘೋಷಿಸಿದೆ. ಇದು ತುಳುವರ ದಶಕಗಳ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ ಎಂದು ವೇದಿಕೆ ಹರ್ಷ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳು ಸೂರ್ಯ-ಚಂದ್ರನ ಚಿಹ್ನೆ ಇರುವ ತುಳು ಬಾವುಟ ಹಾಗೂ ಸೂರ್ಯ ಚಂದ್ರ ಚಿನ್ನೆ ಇರುವ ಕೆಂಪು ತುಳು ಶಾಲು ಧರಿಸಿ ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆದರು. ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಬೇಕು, ತುಳುನಾಡಿನ ಸಂಸ್ಕೃತಿ, ನೆಲ, ಭಾಷೆ ರಕ್ಷಣೆಯಾಗಬೇಕು ಹಾಗೂ ಸರ್ಕಾರದ ಈ ಘೋಷಣೆ ಕೇವಲ ಕಾಗದದಲ್ಲಿ ಉಳಿಯದೆ ಅನುಷ್ಠಾನವಾಗಬೇಕು ಎಂದು ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥಿಸಲಾಯಿತು.
ವಿಶ್ವವಿಖ್ಯಾತ ಹಂಪಿ ಹಾಗೂ ಅಂಜನಾದ್ರಿ ಬೆಟ್ಟದಲ್ಲಿ ತುಳು ಬಾವುಟ ಪ್ರದರ್ಶನ
ಮಂತ್ರಾಲಯದ ಬಳಿಕ ಇತಿಹಾಸ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಹಾಗೂ ಆಂಜನೇಯ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ (ಕೊಪ್ಪಳ ಜಿಲ್ಲೆ) ವೇದಿಕೆಯು ತುಳು ಬಾವುಟ ಹಾರಿಸಿತು.
ಈ ಸಂದರ್ಭದಲ್ಲಿ ಸೂರ್ಯ-ಚಂದ್ರ ಚಿಹ್ನೆ ಇರುವ ಕೆಂಪು ತುಳು ಬಾವುಟ ಹಿಡಿದು, ಅಲ್ಲಿಗೆ ಬಂದಿದ್ದ ವಿದೇಶಿ ಪ್ರವಾಸಿಗರಿಗೆ ತುಳು ಭಾಷೆ ಮತ್ತು ಸಂಸ್ಕೃತಿಯ ಪರಿಚಯ ಮಾಡಿಸಲಾಯಿತು. ವಿದೇಶಿ ಪ್ರವಾಸಿಗರು ಕೂಡ ಕುತೂಹಲದಿಂದ ತುಳುನಾಡಿನ ಆಚಾರ-ವಿಚಾರ, ವಿಶೇಷ ಸಂಸ್ಕೃತಿ, ಆಚರಣೆ ಹಾಗೂ ಸೂರ್ಯ-ಚಂದ್ರ ಇರುವ ಬಾವುಟದ ಬಗ್ಗೆ ಕೇಳಿ ತಿಳಿದುಕೊಂಡು, ತುಳುನಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ವಿದೇಶಿ ಪ್ರವಾಸಿಗರು ಕೂಡ ಖುಷಿಯಿಂದ ತುಳು ಬಾವುಟ ಹಿಡಿದು ಫೋಟೋಗೆ ನಿಂತಿದ್ದು ವಿಶೇಷವಾಗಿತ್ತು.
“ಜಾತಿ-ಮತ, ಭೇದ-ಭಾವ ಇಲ್ಲದೇ ಹಲವು ಭಾಷೆಗಳು, ಹಲವು ಧರ್ಮಗಳು, ಹಲವು ಸಂಸ್ಕೃತಿಗಳು ಇರುವ ಈ ಪುಣ್ಯದ ಮಣ್ಣು, ಬೆರ್ಮೆರ್ ಸೃಷ್ಟಿಯ ನಾಡೇ ನಮ್ಮ ತುಳುನಾಡು. ಸರ್ಕಾರದ ಈ ಘೋಷಣೆಯ ಖುಷಿಯನ್ನು ಹಂಪಿಯಂತಹ ವಿಶ್ವ ಪರಂಪರೆ ತಾಣದಲ್ಲಿ ಹಂಚಿಕೊಳ್ಳುವುದು ನಮಗೆ ಹೆಮ್ಮೆಯ ವಿಷಯ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವವರೆಗೂ ನಮ್ಮ ಹೋರಾಟ ನಿರಂತರ” ಎಂದು ಪದಾಧಿಕಾರಿಗಳು ತಿಳಿಸಿದರು. ತುಳು ಭಾಷೆ, ತುಳುನಾಡಿನ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಕೆಲಸವನ್ನು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ ಜೇಪ್ಪು ನೇತೃತ್ವದಲ್ಲಿ ಹಲವು ದಶಕಗಳಿಂದ ಮಾಡಿಕೊಂಡು ಬರುತ್ತಿದೆ ಎಂದು ಪದಾಧಿಕಾರಿಗಳು ತಿಳಿಸಿದರು
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕುಲಾಲ್, ಬೈರಂಪಳ್ಳಿ ಘಟಕದ ಅಧ್ಯಕ್ಷ ಕೃಷ್ಣಾನಂದ ನಾಯಕ್, ಸಚಿನ್ ಕುಮಾರ್ ಶೆಟ್ಟಿ, ಅಜಯ್ ಕುಲಾಲ್, ರಂಜಿತ್ ಕುಲಾಲ್ ಉಪಸ್ಥಿತರಿದ್ದರು.

