ಮಾರಕ ಕಾಯಿಲೆಯಿಂದ ಬಳಲುತ್ತಿರುವ ಗೋಪಾಲಕೃಷ್ಣ ಭಟ್‌ಗೆ ಯುವ ತೇಜಸ್ಸು ಟ್ರಸ್ಟ್ ನೆರವು

0
50

165ನೇ ಯೋಜನೆಯಡಿ ₹20 ಸಾವಿರ ಸಹಾಯಧನ ವಿತರಣೆ

ಕಾಸರಗೋಡು: ಜಿಲ್ಲೆಯ ಮುಳ್ಳೇರಿಯಾ ಮೊಟ್ಟೆಕುಂಜ ನಿವಾಸಿ ಗೋಪಾಲಕೃಷ್ಣ ಭಟ್ ಅವರು ಟಿ-ಸೆಲ್ ಲ್ಯುಕೇಮಿಯಾ ಎಂಬ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಮುಂದಿನ ಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯವಿದ್ದ ಹಿನ್ನೆಲೆಯಲ್ಲಿ ‘ಯುವ ತೇಜಸ್ಸು ಟ್ರಸ್ಟ್’ಗೆ ಮನವಿ ಸಲ್ಲಿಸಿದ್ದರು.

ಅವರ ಮನವಿಯನ್ನು ಪರಿಗಣಿಸಿದ ಟ್ರಸ್ಟ್, ಇದನ್ನು ತನ್ನ 165ನೇ ಸಮಾಜಸೇವಾ ಯೋಜನೆಯಾಗಿ ಕೈಗೆತ್ತಿಕೊಂಡು ಚಿಕಿತ್ಸೆಗೆ ನೆರವು ನೀಡಿದೆ. ಟ್ರಸ್ಟ್ ವತಿಯಿಂದ ₹20 ಸಾವಿರ ಸಹಾಯಧನದ ಚೆಕ್ ಅನ್ನು ಗೋಪಾಲಕೃಷ್ಣ ಭಟ್ ಅವರಿಗೆ ಸಂಸ್ಥೆಯ ಸದಸ್ಯರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ವಿತರಿಸಲಾಯಿತು.

ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅಗತ್ಯ ಸಂದರ್ಭದಲ್ಲಿ ನೆರವಿನ ಹಸ್ತ ಚಾಚುತ್ತಿರುವ ಯುವ ತೇಜಸ್ಸು ಟ್ರಸ್ಟ್‌ನ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸಂಸ್ಥೆಯ ಪ್ರತಿಯೊಂದು ಸಮಾಜಸೇವಾ ಯೋಜನೆಗೆ ಬೆಂಬಲವಾಗಿ ನಿಂತು ಬಡವರ ಕಣ್ಣೀರೊರೆಸುವ ಕಾರ್ಯದಲ್ಲಿ ಕೈಜೋಡಿಸುತ್ತಿರುವ ಸಂಸ್ಥೆಯ ಸದಸ್ಯರು, ಹಿತೈಷಿಗಳು ಹಾಗೂ ದಾನಿಗಳಿಗೆ ಟ್ರಸ್ಟ್‌ನ ವತಿಯಿಂದ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು.

‘ಒಂದಿಷ್ಟು ಸಮಾಜಕ್ಕಾಗಿ’ ಎಂಬ ಆಶಯದೊಂದಿಗೆ ಯುವ ತೇಜಸ್ಸು ಟ್ರಸ್ಟ್ ತನ್ನ ಸಮಾಜಮುಖಿ ಸೇವಾ ಕಾರ್ಯಗಳನ್ನು ಮುಂದುವರಿಸುತ್ತಿದೆ.