ಮೂಲ್ಕಿಯಲ್ಲಿ ‘ಹೊಸ ಅಂಗಣ’ ಮಾಸಪತ್ರಿಕೆಯ ದಶಮಾನೋತ್ಸವ ಸಂಭ್ರಮ

0
8

ಮೂಲ್ಕಿ, ಸೆ.29: ಮೂಲ್ಕಿ ಪರಿಸರದಲ್ಲಿ ಕಳೆದ ಹತ್ತು ವರ್ಷಗಳಿಂದ ಜನಮನ ಗೆದ್ದಿರುವ ‘ಹೊಸ ಅಂಗಣ’ ಮಾಸಪತ್ರಿಕೆಯ ದಶಮಾನೋತ್ಸವ ಸಂಭ್ರಮ ಅ.4ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನ್ನಪೂರ್ಣ ಸಭಾಗೃಹದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ದಶಮಾನೋತ್ಸವದ ಅಂಗವಾಗಿ ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ, ವಿಶೇಷ ಸಂಚಿಕೆ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ, ‘ಹೊಸ ಅಂಗಣ’ ರಾಜ್ಯ ಪ್ರಶಸ್ತಿ ಪ್ರದಾನ, ಗೌರವ ಸಮಾರಂಭ ಹಾಗೂ ಚಿಂತನ-ಮಂಥನ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 11.30ಕ್ಕೆ ರಂಗಮಿಶ್ರಣ ಗ್ರೂಪ್, ಮಂಗಳೂರು ಇವರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದು, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುವರು. ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಉದ್ಘಾಟನೆ ನೆರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಅಂತರಾಷ್ಟ್ರೀಯ ವಾಸ್ತು ತಜ್ಞ ಹಾಗೂ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಮಾಜಿ ಸಚಿವರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು, ಧಾರ್ಮಿಕ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ‘ಹೊಸ ಅಂಗಣ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪತ್ರಿಕೆಯ ಗೌರವ ಸಲಹೆಗಾರರು ಹಾಗೂ ವಿವಿಧ ಮಾಧ್ಯಮ ಸಂಸ್ಥೆಗಳ ಪತ್ರಿಕಾ ಪ್ರತಿನಿಧಿಗಳನ್ನೂ ದಶಮಾನೋತ್ಸವದ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ಕಳೆದ ಹತ್ತು ವರ್ಷಗಳಿಂದ ‘ಹೊಸ ಅಂಗಣ’ ಮಾಸಪತ್ರಿಕೆಯನ್ನು ಬೆಂಬಲಿಸುತ್ತಾ ಬಂದಿರುವ ಓದುಗರು, ಪತ್ರಿಕಾಭಿಮಾನಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಧಾನ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್ ಹಾಗೂ ಗೌರವ ಸಂಪಾದಕ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.