ಕಾಸರಗೋಡಿನಲ್ಲಿ ನ.1ರಂದು ಗಡಿನಾಡು ಕನ್ನಡ ರಾಜ್ಯೋತ್ಸವ ಸಂಭ್ರಮ

0
43

ಪ್ರಶಸ್ತಿ ಪ್ರದಾನ, ಅಂತರ್‌ರಾಜ್ಯ ಮಟ್ಟದ ಕಲಾ ಮೇಳ; ಕೇರಳ–ಕರ್ನಾಟಕದ ಪ್ರತಿಭೆಗಳ ಸಂಗಮ

ಕಾಸರಗೋಡು: ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು ಗಡಿನಾಡು ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸಭಾಭವನದಲ್ಲಿ ‘ಗಡಿನಾಡು ಕನ್ನಡ ರಾಜ್ಯೋತ್ಸವ ಸಂಭ್ರಮ–2026’ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಅಂತರ್‌ರಾಜ್ಯ ಮಟ್ಟದ ಕಲಾ ಮೇಳ ನಡೆಯಲಿದೆ.

ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕದ ‘ಕನ್ನಡ ಸಂಘ’ (ನೋ.), ಬೆಂಗಳೂರು ಇವರ ಪ್ರಯೋಜಕತ್ವದಲ್ಲಿ, ಕನ್ನಡ ಭವನದ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ನಡೆಯಲಿರುವ ಕಾರ್ಯಕ್ರಮವು ನವೆಂಬರ್ 1ರಂದು ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳಲಿದೆ.

ಕೇರಳ ಮತ್ತು ಕರ್ನಾಟಕ ರಾಜ್ಯಗಳ ವಿವಿಧ ಭಾಗಗಳ ಕಲಾವಿದರು, ಪ್ರತಿಭೆಗಳು ಹಾಗೂ ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಗಡಿನಾಡಿನ ಕನ್ನಡ ಸಂಸ್ಕೃತಿ, ಕಲೆ ಮತ್ತು ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶ ಹೊಂದಿದೆ. ಪ್ರಶಸ್ತಿ ಪ್ರದಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅಂತರ್‌ರಾಜ್ಯ ಮಟ್ಟದ ಕಲಾ ಪ್ರದರ್ಶನಗಳು ನಡೆಯಲಿವೆ.

ಕಾರ್ಯಕ್ರಮದ ರೂಪುರೇಷೆ ಕುರಿತು ಈಗಾಗಲೇ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಮಂಜುನಾಥ್ ಹಾಗೂ ಕನ್ನಡ ಸಂಘದ ಪದಾಧಿಕಾರಿಗಳಾದ ದಶರತಿ ಮತ್ತು ಕೃಷ್ಣಮೂರ್ತಿ ಅವರು ಕನ್ನಡ ಭವನಕ್ಕೆ ಭೇಟಿ ನೀಡಿ ಸಮಾಲೋಚನಾ ಸಭೆ ನಡೆಸಿದ್ದಾರೆ. ಕಾರ್ಯಕ್ರಮದ ವಿವಿಧ ಆಯೋಜನಾ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಡಿನಾಡಿನಲ್ಲಿ ಕನ್ನಡದ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಸಂಭ್ರಮವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ.