ಪಕ್ಷ ಸಂಘಟನೆಗೆ ಕ್ರೀಡಾ ವೇದಿಕೆ : ಭಾರತ್ ಜೋಡೋ ಟ್ರೋಫಿಗೆ ಚಾಲನೆ

0
32

ಹೆಜಮಾಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ಕ್ರಿಕೆಟ್, ಥ್ರೋಬಾಲ್ ಪಂದ್ಯಾವಳಿ

ಪಡುಬಿದ್ರಿ : ಪರಸ್ಪರ ಸಾಮರಸ್ಯ ಹಾಗೂ ಪಕ್ಷ ಸಂಘಟನೆಯ ಉದ್ದೇಶದಿಂದ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ಆಯೋಜಿಸಿರುವ ಭಾರತ್ ಜೋಡೋ ಟ್ರೋಫಿ-2026 ಕ್ರಿಕೆಟ್ ಮತ್ತು ಥ್ರೋಬಾಲ್ ಪಂದ್ಯಾವಳಿಗೆ ಹೆಜಮಾಡಿ ಬಸ್ತಿಪಡ್ಪು ರಾಜೀವ ಗಾಂಧಿ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಹಾಗೂ ಮಹಿಳಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಪು ಬ್ಲಾಕ್ ವ್ಯಾಪ್ತಿಯ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.

ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, “ಪರಸ್ಪರ ಸಾಮರಸ್ಯ ಹಾಗೂ ಪಕ್ಷ ಸಂಘಟನೆಯ ಉದ್ದೇಶದಿಂದ ಭಾರತ್ ಜೋಡೋ ಪಂದ್ಯಾಟವನ್ನು ಆಯೋಜಿಸಲಾಗಿದೆ. ಪಕ್ಷದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಇದರಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿ. ಈ ಮೂಲಕ ಕಾರ್ಯಕರ್ತರಿಗೆ ಜನರೊಂದಿಗೆ ಬೆರೆಯಲು ಉತ್ತಮ ವೇದಿಕೆ ದೊರೆತಂತಾಗಿದೆ. ಭಾರತ್ ಜೋಡೋ ನಮ್ಮ ಸಂಕಲ್ಪವಾಗಿದೆ” ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಅದಾನಿ ಪವರ್ ಕಾರ್ಪೋರೇಷನ್ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಹಾಗೂ ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಮಾತನಾಡಿದರು.

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಬೋಧ್‌ಚಂದ್ರ ಹೆಜಮಾಡಿ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ದೀಪಕ್ ಕೋಟ್ಯಾನ್, ನವೀನ್‌ಚಂದ್ರ ಸುವರ್ಣ, ದಿವಾಕರ ಶೆಟ್ಟಿ ಕಾಪು, ಮೋಹನ್‌ದಾಸ್ ಹೆಜಮಾಡಿ, ಜಿನರಾಜ್ ಬಂಗೇರ, ದಿನಕರ ಹೇರೂರು, ವಿಶ್ವಾಸ್ ವಿ. ಅಮೀನ್, ಸರ್ಫುದ್ದೀನ್ ಶೇಖ್, ಶಾಂತಲತಾ ಶೆಟ್ಟಿ, ಲಿಡಿಯಾ ಫುರ್ಟಾಡೋ, ಸುಧೀರ್ ಕರ್ಕೇರ, ಅಬ್ದುಲ್ ಅಜೀಜ್ ಹೆಜಮಾಡಿ, ಜಯಶ್ರೀ ಬಂಗೇರ, ರಾಜು ಎಚ್., ವಿಶಾಲ್ ಬಂಗೇರ, ದೀಕ್ಷಾ ಹಾಗೂ ಕಿರಣ್ ಕುಮಾರ್ ಉದ್ಯಾವರ ಸೇರಿದಂತೆ ಕಾಪು ಬ್ಲಾಕ್ ವ್ಯಾಪ್ತಿಯ ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮೀಣ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೇಶವ ಸಾಲ್ಯಾನ್ ವಂದಿಸಿದರು.

34 ತಂಡಗಳ ಭಾಗಿ

ಭಾರತ್ ಜೋಡೋ ಟ್ರೋಫಿ-2026ರ ಕ್ರಿಕೆಟ್ ಪಂದ್ಯಾವಳಿಯಲ್ಲಿ 19 ತಂಡಗಳು ಹಾಗೂ ಥ್ರೋಬಾಲ್ ಪಂದ್ಯಾವಳಿಯಲ್ಲಿ 15 ತಂಡಗಳು ಸೇರಿದಂತೆ ಒಟ್ಟು 34 ತಂಡಗಳು ಭಾಗವಹಿಸಿವೆ. ಪಂದ್ಯಾವಳಿಯ ಮೂಲಕ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕ್ರೀಡಾ ಸ್ಫೂರ್ತಿ, ಪರಸ್ಪರ ಸ್ನೇಹ, ಸಾಮರಸ್ಯ ಮತ್ತು ಪಕ್ಷ ಸಂಘಟನೆಯ ಮನೋಭಾವವನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ.