ಪಣಪಿಲ : ಜೀವನೋಪಾಯಕ್ಕಾಗಿ ಮರದ ಕೆಲಸವನ್ನೇ ನಂಬಿಕೊಂಡು ಬದುಕುತ್ತಿದ್ದ ಪಣಪಿಲ ಗ್ರಾಮದ ಸುರೇಶ್ ಅವರ ಬದುಕಿನಲ್ಲಿ ಸಂಭವಿಸಿದ ದುರ್ಘಟನೆ ಅವರನ್ನು ಸಂಕಷ್ಟಕ್ಕೆ ದೂಡಿದೆ. ಮರದ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮರ ಕತ್ತರಿಸುವ ಯಂತ್ರ ತಾಗಿ ಗಂಭೀರವಾಗಿ ಗಾಯಗೊಂಡ ಸುರೇಶ್ ಅವರ ಒಂದು ಕೈ ತನ್ನ ಬಲವನ್ನು ಕಳೆದುಕೊಂಡಿದ್ದು, ಇದೀಗ ಹಿಂದಿನಂತೆ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.
ಅಪಘಾತದ ಬಳಿಕ ಸುರೇಶ್ ಅವರು ಪ್ರತಿದಿನ ಫಿಜಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಯ ವೆಚ್ಚದ ಜೊತೆಗೆ ಕುಟುಂಬದ ದೈನಂದಿನ ಜೀವನ ನಿರ್ವಹಣೆಯ ಜವಾಬ್ದಾರಿಯೂ ಸವಾಲಾಗಿ ಪರಿಣಮಿಸಿದೆ.
ಈ ಸಂಕಷ್ಟದ ಸಂದರ್ಭದಲ್ಲಿ ರುದ್ರಾಂಶ್ ಕನ್‌ಸ್ಟ್ರಕ್ಷನ್‌ನ ಮಾಲಕ ಅಜಯ್ ದೀಕ್ಷಿತ್ ಶೆಟ್ಟಿ ಅವರು ಸುರೇಶ್ ಅವರ ನೆರವಿಗೆ ಧಾವಿಸಿ ಅವರ ರುದ್ರಾಂಶ ಸೇವಾ ಫೌಂಡೆಶನ್ ನ ಮೂಲಕ ಧನಸಹಾಯ ನೀಡಿದರು. ಸಂಕಷ್ಟದಲ್ಲಿರುವ ವ್ಯಕ್ತಿಯ ನೋವನ್ನು ಅರ್ಥಮಾಡಿಕೊಂಡು ನೆರವಿನ ಹಸ್ತ ಚಾಚಿದ ಅಜಯ್ ದೀಕ್ಷಿತ್ ಶೆಟ್ಟಿ ಅವರ ನಡೆ ಮಾನವೀಯ ಸ್ಪಂದನೆಗೆ ಸಾಕ್ಷಿಯಾಯಿತು.
“ಕಷ್ಟದ ಸಮಯದಲ್ಲಿ ಕೈಹಿಡಿಯುವ ಮನಸ್ಸೇ ನಿಜವಾದ ಮಾನವೀಯತೆ” ಎಂಬುದನ್ನು ಸಾರುವ ರೀತಿಯಲ್ಲಿ ನಡೆದ ಈ ನೆರವು, ಸುರೇಶ್ ಅವರ ಕುಟುಂಬಕ್ಕೆ ಆರ್ಥಿಕ ಸಹಾಯದ ಜೊತೆಗೆ ಆತ್ಮಸ್ಥೈರ್ಯವನ್ನೂ ನೀಡಿದೆ.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ತಾಲ್ಲೂಕು ಸಂಯೋಜಕ ಹರಿಶ್ಚಂದ್ರ ಕೆ.ಸಿ., ಶಿರ್ತಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಹಾಗೂ ವೇದ ಪ್ರಕಾಶ್ ಪಡಿವಾಳ್ ಉಪಸ್ಥಿತರಿದ್ದರು.
ಸುರೇಶ್ ಅವರ ಚಿಕಿತ್ಸೆಗೆ ಹಾಗೂ ಮುಂದಿನ ಬದುಕಿಗೆ ಇನ್ನಷ್ಟು ನೆರವು ದೊರೆಯಲಿ ಎಂಬುದು ಸ್ಥಳೀಯರ ಆಶಯವಾಗಿದೆ.

