
ಬೆಳ್ತಂಗಡಿ : ಗರ್ಡಾಡಿ, ಪಡಂಗಡಿ, ನಾಲ್ಕೂರು, ಬಳಂಜ, ಸೋಣಂದೂರು, ಕುಕ್ಕೇಡಿ ಹಾಗೂ ನಿಟ್ಟಡೆ ಗ್ರಾಮಗಳ ಭಕ್ತರ ಸಹಭಾಗಿತ್ವದಲ್ಲಿ ಶ್ರೀ ಸದಾಶಿವ ದೇವಸ್ಥಾನ ಪೇರಡ್ಕ ಡೆಂಜೋಳಿ ಇದರ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಕುರಿತು ಸಮಾಲೋಚನಾ ಸಭೆ ಗೌರಿಶಂಕರ ಸಭಾಂಗಣದಲ್ಲಿ ನಡೆಯಿತು.
ದೇವಸ್ಥಾನದ ಆಡಳಿತ ಮುಖ್ಯಸ್ಥ ಉದಯ ಮಂಜಿತ್ತಾಯ ಹಾಗೂ ಶಾಸಕ ಹರೀಶ್ ಪೂಂಜ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳು, ಬ್ರಹ್ಮಕಲಶೋತ್ಸವದ ಸಿದ್ಧತೆಗಳು ಹಾಗೂ ಭಕ್ತರ ಸಹಕಾರದ ಕುರಿತು ಚರ್ಚಿಸಲಾಯಿತು.
ಏಳು ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಸ್ಥಾನದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳ ಯಶಸ್ಸಿಗೆ ಕೈಜೋಡಿಸುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಭೆಯಲ್ಲಿ ಜಿ. ಜಯರಾಮ ಗೌಡ, ಹಂಕರ್ಜಾಲ್ ಶ್ರೀನಿವಾಸ ಶೆಟ್ಟಿ, ಶ್ರೀಧರ್ ಪೂಜಾರಿ ಪರಿಮುಗ, ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ನಂದಿಕೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜೇಶ್ ಆಚಾರ್ಯ ಸೇರಿದಂತೆ ಹಲವು ಗಣ್ಯರು, ಹಿರಿಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
