ಬೆಂಗಳೂರು : ತುಳು ಭಾಷೆಗೆ ಕರ್ನಾಟಕದ ಎರಡನೇ ಆಡಳಿತ ಭಾಷೆಯ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ತುಳು ಮಾನ್ಯತಾ ಸಂಭ್ರಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಜೈ ತುಳುನಾಡು (ರಿ.)ಬೆಂಗಳೂರು ಘಟಕದ ನೇತೃತ್ವದಲ್ಲಿ ತುಳು ಲಿಪಿಯ ಪ್ರಚಾರ ಮತ್ತು ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ‘ಬಲೆ ತುಳು ಲಿಪಿಟ್ ಬರೆಕ’ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.

ತುಳು ಭಾಷೆಯೊಂದಿಗೆ ತುಳು ಲಿಪಿಯನ್ನೂ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜೈ ತುಳುನಾಡು (ರಿ.) ಸಂಘಟನೆ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ತುಳುನಾಡು ಮಾತ್ರವಲ್ಲದೆ ಬೆಂಗಳೂರಿನಲ್ಲಿಯೂ ತುಳು ಲಿಪಿಯ ಕುರಿತು ಅರಿವು ಮೂಡಿಸುವ ಹಾಗೂ ಕಲಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ತುಳು ಲಿಪಿಯ ಬೆಳವಣಿಗೆ ಮತ್ತು ಮುಂದಿನ ಪೀಳಿಗೆಗೆ ಅದರ ಪರಿಚಯವನ್ನು ಹೆಚ್ಚಿಸುವ ಉದ್ದೇಶದಿಂದ ವಿವಿಧ ಘಟಕಗಳ ಮೂಲಕ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
‘ಬಲೆ ತುಳು ಲಿಪಿಟ್ ಬರೆಕ’ ಕಾರ್ಯಕ್ರಮದಲ್ಲಿ ಶಿಕ್ಷಕರಾಗಿ ಧನಂಜಯ ಆಚಾರ್ಯ, ಶುಭಕರ್ ನಾಯ್ಕ್ , ಶರತ್ ಕೊಡವೂರು ಹಾಗೂ ಧನರಾಜ್ ಕುಲಾಲ್ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ತುಳು ಲಿಪಿಯ ಮಹತ್ವ, ಅದರ ಕಲಿಕೆ ಹಾಗೂ ಸಂರಕ್ಷಣೆಯ ಕುರಿತು ಮಾಹಿತಿ ನೀಡಲಾಯಿತು.
ತುಳು ಭಾಷೆಗೆ ದೊರೆತ ಆಡಳಿತ ಭಾಷೆಯ ಮಾನ್ಯತೆಯೊಂದಿಗೆ ತುಳು ಲಿಪಿಯ ಸಂರಕ್ಷಣೆ ಮತ್ತು ಪ್ರಚಾರಕ್ಕೂ ಹೆಚ್ಚಿನ ಒತ್ತು ನೀಡಬೇಕೆಂಬ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

