ಆಧಾರ್‌ನಲ್ಲಿ ಹೆಸರು ಬದಲಾವಣೆಗೆ ಹೊಸ ನಿಯಮ : ದಾಖಲೆ ಕಡ್ಡಾಯ

0
51

ನವದೆಹಲಿ : ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಅಥವಾ ಬದಲಾವಣೆ ಮಾಡುವ ನಿಯಮಗಳಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಸೆಪ್ಟೆಂಬರ್ 18ರಿಂದಲೇ ಹೊಸ ನಿಯಮಗಳು ಜಾರಿಗೆ ಬಂದಿದ್ದು, ಹೆಸರು ಬದಲಾವಣೆಯ ಸ್ವರೂಪಕ್ಕೆ ಅನುಗುಣವಾಗಿ ನಿರ್ದಿಷ್ಟ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಸಣ್ಣ ಕಾಗುಣಿತ ತಪ್ಪು ಸರಿಪಡಿಸುವುದು, ಹೆಸರಿನ ಮೊದಲಕ್ಷರವನ್ನು ವಿಸ್ತರಿಸುವುದು, ಇನಿಷಿಯಲ್ ಸೇರ್ಪಡೆ ಅಥವಾ ತೆಗೆದುಹಾಕುವುದು, ಮನೆಹೆಸರು ಸೇರಿಸುವುದು ಹಾಗೂ ಹೆಸರಿನ ಪದಗಳ ಕ್ರಮ ಬದಲಿಸುವಂತಹ ತಿದ್ದುಪಡಿಗಳಿಗೆ ಮಾನ್ಯ ಗುರುತಿನ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ. ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿ ಸೇರಿದಂತೆ ಮಾನ್ಯ ದಾಖಲೆಗಳನ್ನು ಬಳಸಬಹುದು.

ಮದುವೆ ಬಳಿಕ ಹೆಸರು ಬದಲಾವಣೆಗೆ ದಾಖಲೆ ಅಗತ್ಯ

ಮದುವೆಯ ಬಳಿಕ ಗಂಡನ ಮನೆಹೆಸರು ಸೇರಿಸಿಕೊಳ್ಳುವುದು ಅಥವಾ ವಿಚ್ಛೇದನದ ಬಳಿಕ ಹೆಸರು ಬದಲಾಯಿಸುವುದಕ್ಕೂ ಅವಕಾಶವಿದೆ. ಇದಕ್ಕಾಗಿ ಮಾನ್ಯ ಗುರುತಿನ ಪುರಾವೆಯೊಂದಿಗೆ UIDAI ನಿಗದಿಪಡಿಸಿರುವ ನಮೂನೆಯ ಅಫಿಡವಿಟ್ ಹಾಗೂ ಅಗತ್ಯವಿದ್ದಲ್ಲಿ ವಿವಾಹ ನೋಂದಣಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಆಧಾರ್‌ನಲ್ಲಿರುವ ಇಂಗ್ಲಿಷ್ ಹೆಸರು ಸರಿಯಾಗಿದ್ದು, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಹೆಸರು ತಪ್ಪಾಗಿ ಮುದ್ರಣವಾಗಿದ್ದರೂ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಇದಕ್ಕಾಗಿ ಅಗತ್ಯ ಗುರುತಿನ ಪುರಾವೆಯೊಂದಿಗೆ ನಿಗದಿತ ನಮೂನೆಯ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.

ಸಂಪೂರ್ಣ ಹೆಸರು ಬದಲಾವಣೆಗೆ ಗೆಜೆಟ್ ಅಧಿಸೂಚನೆ

ವ್ಯಕ್ತಿಯು ತನ್ನ ಮೂಲ ಹೆಸರನ್ನೇ ಸಂಪೂರ್ಣವಾಗಿ ಹೊಸ ಹೆಸರಿಗೆ ಬದಲಾಯಿಸಲು ಬಯಸಿದರೆ ಹೆಚ್ಚುವರಿ ದಾಖಲೆಗಳು ಅಗತ್ಯವಾಗುತ್ತವೆ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆ, ಹೊಸ ಹೆಸರನ್ನು ಹೊಂದಿರುವ ಗುರುತಿನ ಪುರಾವೆ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿರುವ ಜಾಹೀರಾತಿನ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.

ಹೆಸರು ತಿದ್ದುಪಡಿಗೆ ₹75 ಶುಲ್ಕ

ಜನಸಂಖ್ಯಾ ವಿವರಗಳ ತಿದ್ದುಪಡಿಗೆ ನಿಯಮಾನುಸಾರ ₹75 ಶುಲ್ಕ ಅನ್ವಯಿಸುತ್ತದೆ. ಪ್ರಸ್ತುತ myAadhaar ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ವಿಳಾಸ ತಿದ್ದುಪಡಿಗೆ ಮಾತ್ರ ಅವಕಾಶವಿದ್ದು, ಹೆಸರು ತಿದ್ದುಪಡಿ ಮಾಡಿಸಿಕೊಳ್ಳಲು ಅಗತ್ಯ ದಾಖಲೆಗಳೊಂದಿಗೆ ಸಮೀಪದ ಆಧಾರ್ ಸೇವಾ ಕೇಂದ್ರಕ್ಕೆ ತೆರಳಿ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಬೇಕಾಗುತ್ತದೆ.

ಸಾಮಾನ್ಯ ನಿಯಮದಂತೆ ಆಧಾರ್‌ನಲ್ಲಿ ಹೆಸರನ್ನು ಗರಿಷ್ಠ ಎರಡು ಬಾರಿ ಬದಲಾಯಿಸಲು ಅವಕಾಶವಿದೆ. ಹೊಸ ಪ್ರಮಾಣಿತ ಕಾರ್ಯವಿಧಾನದ ಮೂಲಕ ಅರ್ಜಿಗಳ ನೈಜತೆಯನ್ನು ಪರಿಶೀಲಿಸುವುದರ ಜೊತೆಗೆ ನಕಲಿ ದಾಖಲೆಗಳ ಬಳಕೆಯನ್ನು ತಡೆಯಲು ಹೆಚ್ಚಿನ ಒತ್ತು ನೀಡಲಾಗಿದೆ. ಆದ್ದರಿಂದ ಹೆಸರು ತಿದ್ದುಪಡಿಗೆ ಮುಂದಾಗುವವರು ತಮ್ಮ ಬದಲಾವಣೆಯ ಸ್ವರೂಪಕ್ಕೆ ಅನುಗುಣವಾದ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವುದು ಅಗತ್ಯವಾಗಿದೆ.