ಗಜನಿ ಶ್ರೀ ಶಾರದಾ ಮೂಕಾಂಬಿಕಾ ದೇವಳದಲ್ಲಿ ಅ.11ರಿಂದ ದಸರಾ ಮಹೋತ್ಸವ

0
17

ಮುಲ್ಕಿ : ಚಿತ್ರಾಪು ಸಮೀಪದ ಗಜನಿಯ ಶ್ರೀ ಶಾರದಾ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ನವರಾತ್ರಿ ಹಾಗೂ ವಿಜಯದಶಮಿ ಪ್ರಯುಕ್ತ ದಸರಾ ಮಹೋತ್ಸವವು ಅ.11ರಿಂದ ಅ.21ರವರೆಗೆ ವಿವಿಧ ಧಾರ್ಮಿಕ ಹಾಗೂ ಭಕ್ತಿಪೂರ್ವಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅ.11ರ ಭಾನುವಾರ ಬೆಳಗ್ಗೆ 6.25ರಿಂದ ಧರ್ಮದೇವತೆಗಳ ದರ್ಶನ, ಕಲಶ ಪ್ರತಿಷ್ಠಾಪನೆ ಹಾಗೂ ಭಜನೆ ನಡೆಯಲಿದ್ದು, ಮಧ್ಯಾಹ್ನ 12.15ಕ್ಕೆ ಮಹಾಪೂಜೆ ನೆರವೇರಲಿದೆ. ರಾತ್ರಿ 8 ಗಂಟೆಯಿಂದ ಭಜನೆ ಹಾಗೂ ರಾತ್ರಿ 9.30ಕ್ಕೆ ಮಹಾಪೂಜೆ ನಡೆಯಲಿದೆ.

ಅ.12ರಿಂದ ಅ.16ರವರೆಗೆ ಪ್ರತಿದಿನ ಬೆಳಗ್ಗೆ 10.30ರಿಂದ ಭಜನೆ ಹಾಗೂ ಮಧ್ಯಾಹ್ನ 12.15ಕ್ಕೆ ಮಹಾಪೂಜೆ ಅಥವಾ ಸರ್ವಸೇವೆ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಭಜನೆ ಹಾಗೂ ರಾತ್ರಿ 9.30ಕ್ಕೆ ಮಹಾಪೂಜೆ ನಡೆಯಲಿದೆ.

ಅ.13ರಂದು ಮಧ್ಯಾಹ್ನ 12.15ಕ್ಕೆ ಗಜನಿ ಯುವವೃಂದದ ಸದಸ್ಯರಿಂದ ಸರ್ವಸೇವೆ ನಡೆಯಲಿದೆ. ಅ.17ರಂದು ಮಧ್ಯಾಹ್ನ 12.15ಕ್ಕೆ ಮೂಲ ಶಾರದಾ ಪೂಜೆ ಶ್ರೀ ಸನ್ನಿಧಿಯಲ್ಲಿ ನೆರವೇರಲಿದೆ. ಅ.18ರಂದು ಬೆಳಗ್ಗೆ 10.30ರಿಂದ ಭಜನೆ ಹಾಗೂ ಮಧ್ಯಾಹ್ನ 12.15ಕ್ಕೆ ಮಹಾಪೂಜೆ ನಡೆಯಲಿದೆ.

ಅ.19 ಮತ್ತು ಅ.20ರಂದು ಬೆಳಗ್ಗೆ 10.30ರಿಂದ ಭಜನೆ ಹಾಗೂ ಮಧ್ಯಾಹ್ನ 12.15ಕ್ಕೆ ಸರ್ವಸೇವೆ ನಡೆಯಲಿದ್ದು, ರಾತ್ರಿ 8 ಗಂಟೆಯಿಂದ ಭಜನೆ ಹಾಗೂ ರಾತ್ರಿ 9.30ಕ್ಕೆ ಮಹಾಪೂಜೆ ನೆರವೇರಲಿದೆ.

ದಸರಾ ಮಹೋತ್ಸವದ ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ 11.30ರಿಂದ 12.15ರವರೆಗೆ ಹಾಗೂ ರಾತ್ರಿ 8.30ರಿಂದ 9.15ರವರೆಗೆ ಶ್ರೀ ಸನ್ನಿಧಿಯಲ್ಲಿ ಹೂವಿನ ಪೂಜೆ ನಡೆಯಲಿದ್ದು, ಭಕ್ತಾದಿಗಳು ಈ ಸಂದರ್ಭದಲ್ಲಿ ಪೂಜೆ ಸಲ್ಲಿಸಬಹುದಾಗಿದೆ.

ವಿಜಯದಶಮಿ ವಿಶೇಷ ಕಾರ್ಯಕ್ರಮ

ಅ.21ರ ವಿಜಯದಶಮಿ ದಿನ ಬೆಳಗ್ಗೆ 6.25ಕ್ಕೆ ಧರ್ಮದೇವತೆಗಳ ದರ್ಶನ, ಕಲಶ ವಿಸರ್ಜನೆ, ಪ್ರಾರ್ಥನೆ, ಗಣಹೋಮ, ನಾಗಾರಾಧನೆ, ಗುರುಪೂಜೆ, ಶ್ರೀ ದೇವಿಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕ, ನವಕಪ್ರದಾನ, ಕಲಶಾಭಿಷೇಕ ಹಾಗೂ ಚಂಡಿಕಾ ಹೋಮ ನಡೆಯಲಿದೆ. ಬಳಿಕ ಭಜನೆ, ಮಹಾಪೂಜೆ, ಮಹಾಮಂಗಳಾರತಿ, ಮಹಾಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಸಂಜೆ 6 ಗಂಟೆಯಿಂದ ಭಜನೆ ಹಾಗೂ ಧರ್ಮದೇವತೆಗಳ ದರ್ಶನ ನಡೆಯಲಿದ್ದು, ಬಳಿಕ ಅಮ್ಮನವರ ಮೂರ್ತಿಯ ಮೆರವಣಿಗೆ ಶ್ರೀ ಸನ್ನಿಧಿಯಿಂದ ಹೊರಟು ಮುಂಡೈಗುಂಡಿ ಅಳಿವೆ ಬಾಗಿಲಿನವರೆಗೆ ಸಾಗಲಿದೆ. ಅಲ್ಲಿ ಜಳಕ ಶುದ್ಧಿ ಹಾಗೂ ಜಳಕದ ಕಟ್ಟೆಯಲ್ಲಿ ಪೂಜೆ ನೆರವೇರಿದ ಬಳಿಕ ಸಾನಿಧ್ಯಕ್ಕೆ ಮರಳಲಿದೆ. ನಂತರ ಶ್ರೀ ಮಾತೆಯ ತೊಟ್ಟಿಲು ಸೇವೆ, ಮಹಾಮಂಗಳಾರತಿ, ಮಹಾಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಬಂಧು-ಮಿತ್ರರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಶಾರದಾ ಮೂಕಾಂಬಿಕಾ ದೇವಿಯ ಕೃಪೆಗೆ ಪಾತ್ರರಾಗುವಂತೆ ದೇವಳದ ಭಕ್ತವೃಂದ ಮನವಿ ಮಾಡಿದೆ.