ನವದೆಹಲಿ : ಪ್ರಸ್ತುತ ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರನ್ನು ವಾಯುಪಡೆಯ 29ನೇ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಅಕ್ಟೋಬರ್ 31, 2026ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಅವರು ಏರ್ ಚೀಫ್ ಮಾರ್ಷಲ್ ಶ್ರೇಣಿಗೆ ಬಡ್ತಿ ಪಡೆದು ವಾಯುಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಂದು ನಿವೃತ್ತರಾಗಲಿರುವ ಹಾಲಿ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರ ಉತ್ತರಾಧಿಕಾರಿಯಾಗಿ ದೀಕ್ಷಿತ್ ನೇಮಕಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
1966ರ ಡಿಸೆಂಬರ್ 9ರಂದು ಜನಿಸಿದ ಅಶುತೋಷ್ ದೀಕ್ಷಿತ್ ಅವರು 1986ರ ಡಿಸೆಂಬರ್ 6ರಂದು ಭಾರತೀಯ ವಾಯುಪಡೆಯ ಫೈಟರ್ ವಿಭಾಗಕ್ಕೆ ನಿಯೋಜಿತರಾಗಿದ್ದರು. ಸುಮಾರು 3,500 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವ ಹೊಂದಿರುವ ಅವರು ಪ್ರಾಯೋಗಿಕ ಪರೀಕ್ಷಾ ಪೈಲಟ್ ಹಾಗೂ ಅರ್ಹ ಹಾರಾಟ ಬೋಧಕರಾಗಿದ್ದಾರೆ.
ತಮ್ಮ ದೀರ್ಘ ಸೇವಾವಧಿಯಲ್ಲಿ ಹಲವು ಪ್ರಮುಖ ಕಾರ್ಯಾಚರಣಾ ಹಾಗೂ ಕಾರ್ಯತಂತ್ರದ ಜವಾಬ್ದಾರಿಗಳನ್ನು ನಿರ್ವಹಿಸಿರುವ ದೀಕ್ಷಿತ್, ವಾಯುಪಡೆಯ ಉಪ ಮುಖ್ಯಸ್ಥರಾಗುವ ಮೊದಲು ಹೆಡ್‌ಕ್ವಾರ್ಟರ್ಸ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್‌ನಲ್ಲಿ ಚೀಫ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಟು ದಿ ಚೇರ್ಮನ್, ಚೀಫ್ಸ್ ಆಫ್ ಸ್ಟಾಫ್ ಕಮಿಟಿ (CISC) ಆಗಿ ಸೇವೆ ಸಲ್ಲಿಸಿದ್ದರು.
ಇದಲ್ಲದೆ, ಸೆಂಟ್ರಲ್ ಏರ್ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಅವರು ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. ಅನುಭವ, ಕಾರ್ಯಾಚರಣಾ ಪರಿಣತಿ ಹಾಗೂ ನಾಯಕತ್ವದ ಹಿನ್ನೆಲೆಯುಳ್ಳ ದೀಕ್ಷಿತ್ ಅವರ ನೇಮಕಾತಿ ವಾಯುಪಡೆಯ ಮುಂದಿನ ಹಂತದ ನಾಯಕತ್ವಕ್ಕೆ ಮಹತ್ವದ್ದಾಗಿದೆ.

