ವಾಣಿಜ್ಯ ಹಡಗಿನ ಮೇಲೆ ದಾಳಿ: 11 ಭಾರತೀಯ ನಾವಿಕರಿಗೆ ಗಾಯ

0
50

ನವದೆಹಲಿ : ಪನಾಮ ಧ್ವಜ ಹೊಂದಿದ್ದ ‘ಎಂಟಿ ಆನ್ ಪೀಸ್‌’ ಎಂಬ ವಾಣಿಜ್ಯ ಹಡಗು ಹೊರ್ಮುಜ್ ಜಲಸಂಧಿಯನ್ನು ದಾಟುತ್ತಿದ್ದ ವೇಳೆ ಕ್ಷಿಪಣಿ ದಾಳಿಗೆ ಗುರಿಯಾಗಿದ್ದು, ಹಡಗಿನಲ್ಲಿದ್ದ 11 ಮಂದಿ ಭಾರತೀಯ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಒಮಾನ್ ಅಧಿಕಾರಿಗಳ ನೆರವಿನಿಂದ ತಕ್ಷಣ ತೆರವುಗೊಳಿಸಿ, ಖಾಸಬ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಹಡಗಿನಲ್ಲಿ ಒಟ್ಟು 19 ಮಂದಿ ಸಿಬ್ಬಂದಿ ಇದ್ದರು. ಈ ಪೈಕಿ 17 ಮಂದಿ ಭಾರತೀಯರಾಗಿದ್ದು, ದಾಳಿಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. ಹಡಗಿನ ಮೇಲಿನ ದಾಳಿಯನ್ನು ಭಾರತ ಬಲವಾಗಿ ಖಂಡಿಸಿದ್ದು, ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ವಾಣಿಜ್ಯ ಹಡಗುಗಳ ಸುರಕ್ಷತೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ.

ಜಾಗತಿಕ ವಾಣಿಜ್ಯ ಹಡಗುಗಳ ಕಾರ್ಯಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ನಾವಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊರ್ಮುಜ್ ಜಲಸಂಧಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ದಾಳಿಗಳು ಭಾರತೀಯ ನಾವಿಕರ ಸುರಕ್ಷತೆಯ ಮೇಲೂ ಗಂಭೀರ ಪರಿಣಾಮ ಬೀರುತ್ತಿವೆ. ಕಳೆದ ತಿಂಗಳು ಇದೇ ಮಾರ್ಗದಲ್ಲಿ ವಾಣಿಜ್ಯ ಹಡಗೊಂದರ ಮೇಲೆ ನಡೆದ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದ ಘಟನೆ ನಡೆದಿತ್ತು.

“ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿರುವುದು ತೀವ್ರ ಕಳವಳ ಉಂಟುಮಾಡಿದೆ” ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಹೊರ್ಮುಜ್ ಜಲಸಂಧಿಯು ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಪ್ರಮುಖ ಇಂಧನ ಸಂಪನ್ಮೂಲಗಳ ಸಾಗಣೆಗೆ ಅತ್ಯಂತ ಮಹತ್ವದ ಅಂತರರಾಷ್ಟ್ರೀಯ ಜಲಮಾರ್ಗವಾಗಿದೆ. ಸಂಘರ್ಷದ ಹಿನ್ನೆಲೆಯಲ್ಲಿ ಈ ಜಲಮಾರ್ಗದ ಮೂಲಕ ಸಾಗುವ ವಾಣಿಜ್ಯ ಹಡಗುಗಳ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದೆ.

ಹೊರ್ಮುಜ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆ ಮರುಸ್ಥಾಪಿಸಲು ಎಲ್ಲ ರೀತಿಯ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು. ವಾಣಿಜ್ಯ ಹಡಗುಗಳು, ನಾವಿಕರು ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳು ಕೊನೆಗೊಳ್ಳಬೇಕು. ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ವಾಣಿಜ್ಯ ಸಂಚಾರ ಮತ್ತು ವಹಿವಾಟುಗಳು ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳಬೇಕು ಎಂದು ಭಾರತ ಒತ್ತಾಯಿಸಿದೆ.